Sunday, January 10, 2010

ಅಮೃತೇಶ್ವರ ದೇವಸ್ಥಾನ - ತರೀಕೆರೆ










ಬಹಳ ದಿನಗಳ ಬಿಡುವಿನ ಬಳಿಕ ಮತ್ತೆ ನಿಮ್ಮ ಮುಂದಿದೆ ಒಂದು ಪ್ರವಾಸ ಕಥನ. ನನ್ನ ಕೆಳಗಿನ ಲೇಖನಕ್ಕೆ ಸೌಮ್ಯ ಅಕ್ಕನ ಟೀಕೆ ಓದಿದ ಮೇಲೆ ನನ್ನ ಲೇಖನದ ಶೈಲಿಯನ್ನು ಬದಲಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದೇನೆ. ಈ ಮಧ್ಯೆ ಲೇಪಾಕ್ಷಿ ದೇವಸ್ಥಾನ, ಚಿತ್ರದುರ್ಗದ ಕೋಟೆ, ಬೇಕಲ್ ಕೋಟೆಗೆ ನಾನಿತ್ತ ಭೇಟಿ - ಲಘು ಬರಹವಾಗಿ ಕೆಲವು ದಿನಗಳಲ್ಲಿ ಬರಲಿಕ್ಕು ಸಾಕು.

೨೦೦೮ ಇಸವಿಯಲ್ಲಿ ಪ್ರಶಾಂತ್ ಹಾಗು ನಾನು ಬೈಕೇರಿ ಮಣಿಪಾಲದಿಂದ ಬೆಂಗಳೂರಿಗೆ ಬಂದ ವಿಷಯವನ್ನು ಕೆಳಗಿನ ಒಂದು ಲೇಖನದಲ್ಲಿ ಬರೆದಿದ್ದೇನೆ. ಈ ವರ್ಷ ಅದೇ ಸಂದರ್ಭದ ವಾರ್ಷಿಕೋತ್ಸವದ ಅಂಗವಾಗಿ ಮತ್ತೊಮ್ಮೆ ಬೆಂಗಳೂರಿಗೆ ಹೋದರೆ ಹ್ಯಾಗೆ ಎಂಬುದಾಗಿ ಪ್ರಶಾಂತ್ ಪ್ರಶ್ನಿಸಿದಾಗ ನನ್ನಿಂದ ಸ್ವಲ್ಪ Reluctance ಇದ್ದೇ ಇತ್ತು. ಕಡೆಗಂತೂ ಬಹಳ ವಾದಗಳ ನಂತರ ನಮ್ಮ ಒಪ್ಪಿಗೆ-ನಕಾಶೆ ಸಿದ್ಧವಾಯಿತು. ಪಶ್ಚಿಮ ಘಟ್ಟದ ಅತೀ ಸುಂದರವಾದ ಶಿರಾಡಿ ಘಾಟಿಯ ಮೂಲಕ ಬೆಂಗಳೂರನ್ನು ತಲುಪುವುದೇ ಸೂಕ್ತವೆಂದು ನಿರ್ಧರಿಸಿದ್ದೆವು - ಪ್ರಶಾಂತ್, ಸುರೇಶ್ ಹಾಗು ನಾನು. ಶಿರಾಡಿ ಘಾಟಿಯ ಕಳಪೆ ಕಾಮಗಾರಿಯ ರಸ್ತೆಯ ಅರಿವಿದ್ದರೂ ನಾವದನ್ನೇ ಆಯ್ಕೆಮಾಡಲು ಯಾವ ಪುರುಷಾರ್ಥವೂ ಇರಲಿಲ್ಲ. ಆ ಘಾಟಿಯಲ್ಲಿ ಹೋದಾಗ ಪಟ್ಟ ಪ್ರಯಾಸ ಹೇಳತೀರದು. ೩೪ ಕಿಮಿ ಘಾಟಿಗೆ ೩೪ ಕೋಟಿ ಅವ್ಯವಹಾರ ನಡಿಸಿ ೩-೪ ತಿಂಗಳಲ್ಲೆ ಕಾಮಗಾರಿಯ ಲೋಪಗಳೆಲ್ಲಾ ಬಯಲಾಗಿ ೩-೪ ಗಂಟೆ ಹಾದಿಯ ಪ್ರಯಾಣವಾಗಿ ಮಾಡಿದ ರಸ್ತೆ ಗುತ್ತಿಗೆದಾರರಿಗೆ ಜನರ ಶಾಪ ತಗುಲದೇ ಇರುವುದಿಲ್ಲ.

ಅದೇನೇ ಇರಲಿ, ಇಂತಹ ಒಂದು ಕಷ್ಟಕರ ಪ್ರಯಾಣದ ಬಳಿಕ ಸಕಲೇಶಪುರದಲ್ಲಿನ ಮಂಜರಾಬಾದ್ ಕೋಟೆಗಾಗಲಿ ಹಾಸನದಲ್ಲಿನ ಬೇಲೂರು-ಹಳೇಬೀಡು-ಶ್ರವಣಬೆಳಗೊಳಕ್ಕಾಗಲಿ ಹೋಗುವ ವ್ಯವಧಾನವನ್ನು ಕಳೆದುಕೊಂಡಿದ್ದೆವು. ಆದರೆ ಬೆಂಗಳೂರಿನಿಂದ ಮಣಿಪಾಲಕ್ಕೆ ಬರುವುದಾದರೆ ಶಿವಮೊಗ್ಗ ಮಾರ್ಗವಾಗಿಯೇ ಎಂದು ನಾನು ನನ್ನ ಸಹ-ಪಯಣಿಗರಲ್ಲಿ ಮೊರೆ ಇಡುವಂತವನಾಗಿದ್ದೆ. ಅಷ್ಟೇನೂ ಪ್ರಯಾಸವಿಲ್ಲದೇ ಅವರನ್ನು ಒಪ್ಪಿಸಿದ್ದೂ ಆಯಿತು. ನನ್ನ ಮಸಲತ್ತು ತರೀಕೆರೆಯ ಬಳಿಯ ಅಮೃತಾಪುರ ದೇವಸ್ಥಾನಕ್ಕೆ ಭೇಟಿ ಕೊಡುವುದೇ ಆಗಿತ್ತು. ಹಿಂದೊಮ್ಮೆ ಕೆಮ್ಮಣ್ಣುಗುಂಡಿಗೆ ಹೋದಾಗ ಅಮೃತೇಶ್ವರ ದೇವಸ್ಥಾನಕ್ಕೆ ಹೋಗಲೇ ಬೇಕೆಂಬುದು ನನ್ನ ಹಠವಾಗಿತ್ತು. ಸಹೋದ್ಯೋಗಿ ಪಲ್ಲವಿ ಭಾರ್ಗೇಶಪ್ಪ ಈ ದೇವಸ್ಥಾನದ ಬಗ್ಗೆ ಸಾಕಷ್ಟು ಹೇಳಿದ್ದರು. ಕಾರಣಾಂತರಗಳಿಂದಾಗಿ ಹೋಗಲು ಆಗಲೇ ಇಲ್ಲ.

ಪ್ರಾಚೀನ ದೇವಸ್ಥಾನಗಳನ್ನು ಕಟ್ಟಿದ ವಾಸ್ತುಕಲೆಯಲ್ಲಿ ನೀವೆಲ್ಲರೂ ಗಮನಿಸಬೇಕಾದ ಅಂಶಗಳೆಂದರೆ - ಅಲ್ಲಿನ ಗರ್ಭಗೃಹ, ಅಂತರಾಳ, ಸುಖನಾಶಿ, ನವರಂಗ, ಮುಖಮಂಟಪ, ನಾತ್ಯಗೃಹ, ಸತ್ಯ ಪೀಠ, ಗರುಡಗಂಬ, ದೀಪಸ್ಥಂಬ. ಇವೆಲ್ಲವೂ ಗರ್ಭಿಣಿ ಹೆಂಗಸಿನ ೯ ತಿಂಗಳ ಮಗುವಿನ ಬೆಳವಣಿಗೆಯ ಪ್ರತೀಕ ಎಂಬುದಾಗಿ ಕಳೆದ ವರ್ಷ ಹಂಪಿಗೆ ಹೋದಾಗ ಅಲ್ಲಿನ ಗೈಡ್ ನಮಗೆ ಬೋಧಿಸಿದ್ದರು. ಹಂಪಿಯ ವಿರೂಪಾಕ್ಷ ದೇವಾಲಯವೂ ಇದೇ ವಾಸ್ತುವನ್ನು ಆಧರಿಸಿದೆ.

ಹಾಗೆಯೇ ಇಲ್ಲಿಯೂ ಗರ್ಭಗೃಹ, ಮುಖಮಂಟಪ, ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಸಾಲಿಗ್ರಾಮ ಕಲ್ಲಿನ ಲಿಂಗ ೩ ಚಪ್ಪಟೆ ಮುಖಗಳನ್ನು ಹೊಂದಿದ್ದು ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಬಿಂಬಿಸುತ್ತದೆ. ಹೋಯ್ಸಳರ ದೊರೆ ವಿಷ್ಣುವರ್ಧನನ ಮೊಮ್ಮೊಗ ಎರಡನೆಯ ವೀರ ಬಲ್ಲಾಳ. ಹನ್ನೆರಡನೆಯ ಶತಮಾನದಲ್ಲಿ ಗುರ್ಜರ ಜೊತೆ ಹೋರಾಡಿ ವೀರಮರಣ ಹೊಂದಿದ ಅಮೃತದಂಡನಾಯಕನ ಸ್ಮರಣೆಗಾಗಿ ನಿರ್ಮಿಸಿರ್ತಕ್ಕಂತಹ ಸುಂದರ ದೇವಸ್ಥಾನವೇ - ಅಮೃತೇಶ್ವರ ದೇವಸ್ಥಾನ. ಇದಕ್ಕೆ ಸಾಕ್ಷಿಯಾಗಿರುವುದು ಇಲ್ಲಿರುವ ವೀರಗಲ್ಲು. ಈ ಊರಿಗೆ ಅಮೃತಾಪುರವೆಂದು ನಾಮಾಂಕಿತವಾಗಲೂ ಇದೇ ಕಾರಣವಿದ್ದೀತು. ಇದರ ಶಿಲ್ಪಿ ಮಲ್ಲಿತಮ್ಮ. ಸಾಲಿಗ್ರಾಮದ ಲಿಂಗವನ್ನು ಇಲ್ಲಿ ಸ್ಥಾಪಿಸಿ ಅದಕ್ಕೆ ದಂಡನಾಯಕನ ಹೆಸರನ್ನೇ ನಾಮಕರಣ ಮಾಡಿಸಿದ ವೀರ ಬಲ್ಲಾಳ. ಶಿವಲಿಂಗವಿರುವ ಗೋಪುರದಂತೆಯೇ ಇಡೀ ದೇವಸ್ಥಾನದ ಸುತ್ತಲೂ ಸುಮಾರು ೨೫೦ ಗೋಪುರಗಳನ್ನು ಕೆತ್ತಿದ್ದಾನೆ ಈ ಶಿಲ್ಪಿ. ಪ್ರತಿಯೊಂದು ಗೋಪುರವೂ ನಿಮ್ಮನ್ನು ಖಂಡಿತವಾಗಿಯೂ ಆಕರ್ಷಿಸುತ್ತದೆ. ಕಾರಣ ಇಲ್ಲಿನ ಗೋಪುರಗಳಲ್ಲಿ ನೀವು ಕಾಣಬಹುದಾದ ನಾಜೂಕಾದ ಕೆತ್ತನೆಗಳು. ಒಂದು ಗೋಪುರ ಕಂಡಂತೆ ಮತ್ತೊಂದು ಗೋಪುರ ಕಾಣದು. ಬಳಪದ ಕಲ್ಲಿನ ಈ ದೇವಸ್ಥಾನದ ಓಳಗೆ ೫೨ ಕಂಬಗಳಿದ್ದು, ಪ್ರತಿಯೊಂದು ಕಂಬವೂ ಕನ್ನಡಿಯಂತೆ ಹೊಳೆಯುತ್ತದೆ. ಮುಖಮಂಟಪದಲ್ಲಿ ಶಿಲ್ಪಿ ತ್ರಿಮುರ್ತಿಗಳಿಗೆ ೩ ದ್ವಾರಗಳನ್ನು ನಿರ್ಮಿಸಿದ್ದಾನೆ. ಪೂರ್ವಕ್ಕೆ ಶಿವನ ದ್ವಾರ; ಉತ್ತರಕ್ಕೆ ಬ್ರಹ್ಮನ ದ್ವಾರ; ದಕ್ಷಿಣಕ್ಕೆ ವಿಷ್ಣು ದ್ವಾರ. ಹಾಗೆಯೇ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಲ್ಲಿ ಬರತಕ್ಕಂತಹ ಎಲ್ಲಾ ಶಕ್ತಿ ದೇವರುಗಳನ್ನು ಕೆತ್ತಿದ್ದಾನೆ ಶಿಲ್ಪಿ. ಮಂಟಪದ ಮೇಲ್ಛಾವಣಿಯಲ್ಲಿ ಅತ್ಯುತ್ತಮ ಕುಶಲಕಲೆಯ ಪ್ರತೀಕವಾಗಿದೆ.

ದೇವಸ್ಥಾನದ ಹೊರಾಂಗಣದಲ್ಲಿ ಭಾಗವತ, ಮಹಾಭಾರತ ಹಾಗು ರಾಮಾಯಣ ಕತೆಗಳನ್ನು ಕೆತ್ತಿರುವ ಈ ಶಿಲ್ಪಿ ತನ್ನ ಕೈಚಳಕವನ್ನು ಮೆರೆದಿದ್ದಾನೆ. ಪ್ರತಿಕಡೆಯೂ ಹೋಯ್ಸಳರ ಲಾಂಚನವಾದ ಸಿಂಹವನ್ನು ಮಲ್ಲಿತಿಮ್ಮ ಕೆತ್ತಿರುತ್ತಾನೆ. ರಾಮಾಯಣದ ರಾಮ-ಲಕ್ಷ್ಮಣ ರ ಜನನ, ಸೀತಾ ಸ್ವಯಂವರ, ಭರತನ ಪಟ್ಟಾಭಿಷೇಖ, ವನವಾಸ, ಶೂರ್ಪನಖಿಯ ಸಂಹಾರ, ಸೀತಾಪಹರಣ, ರಾವಣನ ಸಂಹಾರದ ಕತೆಗಳನ್ನು ನಮಗೆ ಅಲ್ಲಿನ ಗೈಡ್ ತೋರಿಸಿಕೊಟ್ಟರು. ಮಹಾಭಾರತದಲ್ಲಿನ ಕೃಷ್ಣನ ಬಾಲ್ಯ, ಶಕಟಾಸುರ ಸಂಹಾರ, ಪೂತನಿ ಸಂಹಾರ, ಕಾಕಾಸುರ ಸಂಹಾರ ಎಲ್ಲವನ್ನೂ ಇಲ್ಲಿ ಕಾಣಬಹುದು. ಪಾಂಡವರ, ಕೌರವ ವಿದ್ಯಾಭ್ಯಾಸ, ಹಿಡಿಂಬಿ-ಬಕಾಸುರ ಸಂಹಾರ, ದ್ರೌಪದಿ ಸ್ವಯಂವರ, ಪಗಡೆ ಆಟ, ವಸ್ತ್ರಾಪಹರಣ, ಮಹಾಭಾರತ ಯುದ್ಧವನ್ನೂ ಕೆತ್ತಿರುತ್ತಾನೆ. ಹಾಗೆಯೇ ಒಂದು ಭಾಗದಲ್ಲಿ ಯಾವ ಕೆತ್ತನೆಯೂ ಇಲ್ಲದೇ ನಮಗಿಂತಲೂ ಒಳ್ಳೆಯ ಶಿಲ್ಪಿ ಯಾರಾದರೂ ಇಲ್ಲಿ ಕಥಾ ವಿವರಣೆ ನೀಡಬಯಸಿದರೆ ಅವರಿಗೊಂದು ಜಾಗ ಮಾಡಿಕೊಟ್ಟಿದ್ದೇವೆ ಎಂಬಂತೆ ತೋರುತ್ತದೆ. ಒಟ್ಟಿನಲ್ಲಿ ಹೋಯ್ಸಳ ವಂಶದಿಂದ ಬಂದಿರುವ ಈ ದೇವಸ್ಥಾನವೂ ನಮಗೆ ವಿಶೇಷವೆನಿಸಿತು.

ತರೀಕೆರೆಯಿಂದ ಏಳೆಂಟು ಕಿ.ಮಿ. ದೂರದಲ್ಲಿ ಇರುವ ಅಮೃತಾಪುರಕ್ಕೆ ಹೋಗಲು ಒಳ್ಳೆಯ ರಸ್ತೇ ಇದೆ. ಹಾಗೆಯೇ ಕೆಲವಷ್ಟು ಬಸ್ ಗಳೂ ಓಡಾಡುತ್ತವೆ, ತರೀಕೆರೆ ಸಮತಳ ಮಾರ್ಗವಾಗಿ ಅಮೃತಾಪುರ ದೇವಸ್ಥಾನವನ್ನು ಸೇರಬಹುದು. ತರೀಕೆರೆಯಲ್ಲಿ ಕೆಲವು ಖಾನಾವಳಿಗಳಿದ್ದು ಊಟೋಪಚಾರಕ್ಕೆ ಎನೂ ಅಡ್ಡಿ ಇಲ್ಲ. ಆದರೆ ಅಮೃತಾಪುರದಲ್ಲಿ ನಿಮಗೇನೂ ಸಿಗಲಿಕ್ಕಿಲ್ಲ. ಆದ್ದರಿಂದ ನಿಮ್ಮ ಪ್ರಯಾಣದಂದು ನಿಮ್ಮ ಹೊಟ್ಟೆಪಾಡಿನ ಚಿಂತೆಗೆ ನೀವೇ ಮಾರ್ಗ ಹುಡುಕಿಕೊಳ್ಳಬೇಕಾಗಬಹುದು. ಕರ್ನಾಟಕ ಸರ್ಕಾರ, ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ದೇವಸ್ಥಾನವನ್ನು ಕರ್ನಾಟಕಕ್ಕೆ ಮತ್ತೊಂದು ಗರಿಯಾಗಿ ಮಾರ್ಪಾಡು ಮಾಡಲು ಹರಸಾಹಸ ಮಾಡುತ್ತಿದ್ದಾರೆ. ಮುಂದೊಂದು ದಿನ ಸಾಧಿಸುತ್ತಾರೆಂಬುದು ದಿಟವೇ.....

ನಿಮಗೆ ಸುಖ ಪ್ರಯಾಣ ಕೋರುವ,
ಪ್ರಕೊಪ

3 comments:

So.....me said...

good one.....
vivara chennagide....
ashtu varsha chikkamagalooralli iddu hogoke aaglilwalla anta koragide....
nimma photos nodidmelantu,next trip allige plan madidini :)

Santosh said...

good writing dude....koreta chennagi ittu....keep up your standards!!!

Yeshu said...

ಉತ್ತಮ ಬರಹ ಪ್ರವೀಣ್,
ಪದ ಬಳಕೆ ತುಂಬಾ ಚನ್ನಾಗಿದೆ. ವಿವರಣೆ ಇಷ್ಟವಾಯ್ತು.
ಮತ್ತಷ್ಟು ಬರಹಗಳು ಮೂಡಿ ಬರಲಿ.