Saturday, April 18, 2009

ಕೆಮ್ಮಣ್ಣಗುಂಡಿಯ ಪ್ರವಾಸ











Shringeri -Observe no one at all near the temple. Snap taken at around 6:30am.
















Kudremukha Sholay Forests

Tea estates

















Sirimane falls / Kigga Falls




















The view from Z point










Sunrise @ the Z point- LtoR Viji, Rajesh, Pachchi, PrAKoPa, Vinni, Raj


View from Dattapeetha











View from Mullaiyanagiri peak
















Mullayanagiri - Highest peak









Hanumangundi Falls (Sootanabbi falls)












Kadambi Falls, on the way to Kudremukha













Sunrise at the Z-point, Kemmannagundi






ಎಲ್ಲರಿಗೂ ನಮಸ್ಕಾರ.

ಕುಪ್ಪಳ್ಳಿ ಪ್ರವಾಸದ ಬೆನ್ನಿನಲ್ಲೇ ಮತ್ತೊಂದು ಪ್ರವಾಸ ನಡೆದುಹೋಯಿತು. ಶುಭ ಶುಕ್ರವಾರ, ಶನಿವಾರ, ಭಾನುವಾರ ದ ರಜೆಯನ್ನು ಹೇಗೆ ಕಳೆಯಬೇಕೆಂದು ಚಿಂತಿಸುತ್ತಿರುವಾಗಲೇ ಪ್ರವೀಣ್ ಗೋರೆ ಮಡಿಕೇರಿ ಜಿಲ್ಲೆಯ ತಡಿಯಂಡಮೋಲ್ ಚಾರಣವನ್ನು ಸೂಚಿಸಿದರು. ಕಾರಣಾಂತರಗಳಿಂದಾಗಿ ಈ Trek ನಮಗೆ ಆಗಿಬರುವಂತೆ ಕಾಣಲಿಲ್ಲ. ಪ್ರಶಾಂತ್ (ಪಚ್ಚಿ) ಹಾಗು ನಾನು ಹೊಸಜಾಗಗಳನ್ನು ಹುಡುಕುತ್ತಿರುವಾಗಲೇ "ಕೆಮ್ಮಣ್ಣುಗುಂಡಿ!!" ಎಂದು ಒಕ್ಕೊರಲಿನಿಂದ ಕೂಗಿದೆವು. ನಮ್ಮ ದ್ವಿಚಕ್ರವಾಹನದಲ್ಲಿ ಕೆಮ್ಮಣ್ಣಗುಂಡಿಗೆ ಹೋಗುವ ಮಾನಸಿಕ ತಯಾರಿಯನ್ನು ಇಬ್ಬರೂ ಆ ಕ್ಷಣದಿಂದಲೇ ಆರಂಭಿಸಿದ್ದೆವು. ಹಾಗೆ ನಮ್ಮನ್ನು ಸೇರಲಿಚ್ಛಿಸಿದವರು ವಿನಯ್, ವಿಜಯ್, ರಾಜೇಶ್, ರಾಜ್ ಕಮಲ್. plan ಮಾಡಲಾರಂಭಿದೆವು. ಅರ್ಧ ಮುಕ್ಕಾಲು ಗಂಟೆಯೊಳಗೆ blue print ನಮ್ಮ ಮುಂದಿತ್ತು. ಆ ಪ್ರಕಾರವಾಗಿ, ಮಣಿಪಾಲದಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಮೂಡಿಗೆರೆ, ಚಿಕ್ಕಮಗಳೂರು ಸೇರಿ ಅಲ್ಲಿಂದ ಮುಳ್ಳಯ್ಯನಗಿರಿ, ದೇವಿರಾಮನ ಬೆಟ್ಟ, ಮಾಣಿಕ್ಯಧಾರ, ದತ್ತಪೀಠ, ವೀಕ್ಷಿಸಿ, ಕೆಮ್ಮಣ್ಣುಗುಂಡಿಯ ಲಾಡ್ಜ್ ನಲ್ಲಿ ತಂಗಿ ಮಾರನೆಯ ಬೆಳಿಗ್ಗೆ ಜ಼ೆಡ್ ಪಾಯಿಂಟ್, ಹೆಬ್ಬೆ ಜಲಪಾತ, ಕಲ್ಹತ್ತಿ ಜಲಪಾತ ಗಳಲ್ಲಿ ಬಿದ್ದು ಹೊರಳಾಡಿ ಮತ್ತೆ ಚಿಕ್ಕಮಗಳೂರು, ಮೂಡಿಗೆರೆ ಚಾರ್ಮಾಡಿ ಮಾರ್ಗವಾಗಿ ಮನೆತಲುಪುವುದೆಂದು. ಈ plan ಒಂದೂವರೆ ದಿನದ ಪ್ರವಾಸವೆನಿಸುತ್ತಿತ್ತು.

ಕೇಳೋಕ್ಕೆ ಚೆನ್ನಾಗಿದೆ ಅನುಷ್ಠಾನಕ್ಕೆ ತರಲು ಹೆಣಗಬೇಕಾಗಬಹುದು ಎಂಬುದೂ ನಮ್ಮ ಮಸ್ತಕಕ್ಕೆ ಹೊಳೆಯದಂತಾಯಿತು. ಗಾಡಿಗಳೆಲ್ಲಾ ರೆಡಿಯಾದವು ೪೦೦ ಕಿ ಮಿ ನ ಎರಡು ದಿನದ ಆ ಯಾತ್ರೆಗೆ. ಪೆಟ್ರೋಲ್ ತುಂಬಿಸಿ, Tyreಗಳಲ್ಲಿ ಗಾಳಿ ಪರೀಕ್ಷಿಸಿಕೊಂಡು, Break- Gear ಗಳನ್ನು ಸ್ವ-ಪ್ರಯೋಗಿಸಿಕೊಂಡು ಬೆಳಗಿನಜಾವ ಆರು ಗಂಟೆಗೆ ಹೊರಟವು 6 ಗಾಡಿಗಳು. ಹೋಟೆಲ್ ಒಂದರಲ್ಲಿ ಬಿಸಿ ಬಿಸಿ ಚಹಾ ಹೀರುತ್ತಿರುವಾಗಲೇ ಅಲ್ಲಿಗೆ ದೇವರಂತೆ ಬಂದವನು ಕಿರಣ್ ದಾಮ್ಲೆ. ಆತ ಬಿತ್ತರಿಸಿದ ವಾರ್ತೆ ನಮ್ಮ ಪ್ರವಾಸಕ್ಕೆ ತಡೆಯೊಡ್ಡುವಂತ್ತಿತ್ತು. ಕಿರಣ್ ಆಗ ಹೇಳಿದ್ದು "ಚಾರ್ಮಾಡಿ ಘಾಟನ್ನು ನವೀಕರಿಸುತ್ತಿದ್ದಾರೆ. ಸೈಕಲ್ಲನ್ನು ಸಹ ಆ ರಸ್ತೆಯಲ್ಲಿ ಬಿಡುತ್ತಿಲ್ಲ"ಎಂದು. ಅವನೊಟ್ಟಿಗೇ ಅನ್ಯ ಮಾರ್ಗದ ಸಾಧ್ಯತೆಯನ್ನು ಹುಡುಕುತ್ತಿರುವಾಗ ದಕ್ಕಿದ ಮಾರ್ಗವೇ.....
Trip date: 9th April - 11th April



Place (distance in km)
ಮಣಿಪಾಲ (0)- ಕಾರ್ಕಳ(34) - ಬಜಗೋಳಿ (43)- ಮಾಳ ಘಾಟ್(50) - ಶೃಂಗೇರಿ (99)- ಜಯಪುರ (120)- ಬಾಳೆಹೊನ್ನೂರು (136)- ಆಲ್ದೂರು (167)- ಚಿಕ್ಕಮಗಳೂರು (186)- ಕೆಮ್ಮಣ್ಣಗುಂಡಿ (250) - ಲಿಂಗದಹಳ್ಳಿ (270)

ಮಣಿಪಾಲದಿಂದ ಬಜಗೋಳಿಯವರೆಗಿನ ಪ್ರಯಾಣ ಸಾಕಷ್ಟು ಬಾರಿ ಕೊರೆದಿರುವೆನಾದ್ದರಿಂದ, ಅಲ್ಲಿಂದ ಮುಂದಿನ ಪ್ರ(ಯಾ)ವಾಸದ ಬಗ್ಗೆ ಗಮನ ಹರಿಸುತ್ತೇನೆ. ಮಾಳ/ಕುದುರೇಮುಖ ಘಾಟಿನ ಲಕ್ಷಣಗಳೆಂದರೆ ದಾರಿಯ ಇಕ್ಕೆಲಗಳಲ್ಲಿನ ದಟ್ಟವಾದ ಕಾಡು ಹೆಚ್ಚು ತಿರುವುಮುರುವಾಗಿರದ ಅಗಲವಾದ ರಸ್ತೆ. ಮಳೆಗಾಲದಲ್ಲಿ ಅಲ್ಲಲ್ಲಿ ಹುಟ್ಟಿಕೊಳ್ಳುವಂತಹ ಪುಟ್ಟ ಪುಟ್ಟ ಜಲಪಾತಗಳು, ಹಾವು-ಮುಂಗೂಸಿಗಳು ಆಗಾಗ ನಿಮ್ಮ ಹಾದಿಯ ನಡುವೆ ಬಂದು ನಿಮ್ಮನ್ನು ಭಯಗೊಳಿಸುವುದು. ಮಾಳ ಚೆಕ್ ಪೋಸ್ಟಿನಿಂದ ಶೃಂಗೇರಿಯ ಕಡೆಗೆ ಹೊರಡಬೇಕು. ಕೆರೆಕಟ್ಟೆಯೆಂಬ ಊರಿನ ಬಳಿ ನಿಮಗೆ ಶೃಂಗೇರಿಯ ಕಡೆಗೆ ಒಂದು ರಸ್ತೆ ಹೋಗುತ್ತದೆ. ಮತ್ತೊಂದು ಸೂತನಬ್ಬಿ ಜಲಪಾತ (ಹನುಮಾನ್ ಗುಂಡಿ ಅಂತಲೂ ಕರೆಯುತ್ತಾರೆ) ಕುದುರೇಮುಖದ ಊರುಗಳಿಗೆ ಕರೆದೊಯ್ಯುತ್ತದೆ. ಮಾಳ ಚೆಕ್ ಪೋಸ್ಟ್ ನಿಂದ ಸೂತನಬ್ಬಿಗೆ 17 ಕಿ.ಮಿ.. ರಸ್ತೆಯಿಂದ ಸುಮಾರು 1oo ಮೆಟ್ಟಿಲು ಕೆಳಗಿಳಿದರೆ ನಿಮಗೆ ಮನಮೋಹಕ ಜಲಪಾತ ಕಾಣಸಿಗುತ್ತದೆ. ಸದಾ ಕಾಲ ಕೊರೆಯುವ ನೀರು (ನಾನು ಛಳಿಗಾಲದಲ್ಲೂ ಇಲ್ಲಿಗೆ ಬಂದಿದ್ದೇನೆ. ಬೇಸಿಗೆಯಲ್ಲೂ ಬಂದಿದ್ದೇನೆ) ಬೇಸಿಗೆಯಲ್ಲಿ ನೀರು ತಣ್ಣಗಿದ್ದರೆ ಚಳಿಗಾಲದಲ್ಲಿ ವಿಪರೀತ ತಣ್ಣಗಿರುತ್ತದೆ. ನೀರಿಗೆ ಇಳಿದ ಕ್ಷಣದಿಂದ ನಡುಕ ಆರಂಭವಾಗುತ್ತದೆ. ಹಲ್ಲುಗಳು ಕಟ ಕಟ ಒಂದಕ್ಕೊಂದು ಬಡಿದುಕೊಳ್ಳಲಾರಂಭಿಸುತ್ತದೆ.ಸುಮಾರು ನೂರಡಿಯ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಕಾಡಿನ ನಡುವೆ ಇದೆ. ಮಳೆಗಾಲದಲ್ಲಿ ಇಮ್ಮಳಗಳ (ಜಿಗಣೆಗಳ) ಭಯ ತರಿಸುತ್ತದೆ. ಇಲ್ಲಿಂದ ಮುಂದೆ ಸಾಗಿದರೆ ಪುಟ್ಟದೊಂದು ಜಲಪಾತ ಸಿಗುತ್ತದೆ. ಇದು ಕದಂಬಿ ಜಲಪಾತ. ಹೆಚ್ಚೇನು ಆಳವಿರದ ಕಾರಣ ಇಲ್ಲಿನ ಗುಂಡಿಗೆ ಇಳಿಯುವುದು ಅಷ್ಟೇನೂ ಸಾಹಸಮಯವಲ್ಲ. ಇಲ್ಲಿಂದ ಕುದುರೆಮುಖಕ್ಕೆ 15ಕಿ.ಮಿ. ಈ ಹಾದಿಯಲ್ಲಿ ಕುದುರೆಮುಖದವರೆಗೂ ಇಂಚು ಇಂಚಿಗೆ ಗಾಡಿ ನಿಲ್ಲಿಸಿ ಛಾಯಚಿತ್ರಗಳನ್ನು ತೆಗೆಯಬೇಕೆಂಬ ಹಂಬಲ ಹೆಚ್ಚಾಗುತ್ತದೆ. ಗಾಡಿ ಓಡಿಸುವವರಿಗೆ ಗಾಡಿ ಓಡಿಸುವ ಖುಷಿ ಒಂದೆಡೆಯಾದರೆ ಸುತ್ತಲಿನ ಪರಿಸರವನ್ನು ನೋಡಲಾಗದೆಂಬ/ಅನುಭವಿಸಲಾಗದೆಂಬ ಅಸೂಯೆ ಮತ್ತೊಂದೆಡೆ,

ಮುಂಚೆಯೆ ಹೇಳಿದಂತೆ ಶೃಂಗೇರಿಯತ್ತ ಹೊರಟಿದ್ದ ನಾವು ಕುದುರೆಮುಖದ ರಮ್ಯ ದೃಶ್ಯವನ್ನು ಕೈಬಿಡಬೇಕಾಗಿತು. ಶೃಂಗೇರಿಯಲ್ಲಿ ಬೆಳಗಿನ ತಿಂಡಿ ಮುಗಿಸಿಕೊಂಡು ಜಯಪುರ - ಬಾಳೆಹೊನ್ನೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಹೊರಟೆವು. ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿನ ವರೆಗೂ ಚಹಾ /ಕಾಫಿ ಎಸ್ಟೇಟುಗಳು. ಬೇಸಿಗೆಯಲ್ಲೂ ತಂಪಾಗಿಸುತ್ತಿತ್ತು ಆ ಎಸ್ಟೇಟುಗಳು. ಚಿಕ್ಕಮಗಳೂರಿನಲ್ಲಿ ಬೇಸಿಗೆಕಾಲವೇ ಇಲ್ಲವೇನೋ ಎಂಬ ಭಾವನೆ ಆ ತಂಪಾದ ವಾತಾವರಣ ಪರಿಪರಿಯಾಗಿ ಹೇಳುತ್ತಿತ್ತು. ತಿರುವುಗಳಿಂದ ಕೂಡಿರುವ ರಸ್ತೆಗಳು ಗಾಡಿ ಚಾಲಕರಿಗೆ ಮಜ ನೀಡುವುದರಲ್ಲಿ ಸಂದೇಹವೇ ಇಲ್ಲ. ಚಿಕ್ಕಮಗಳೂರಿನಲ್ಲಿ ಊಟೋಪಚಾರ ಮುಗಿಸಿ ಮಧ್ಯಾಹ್ನ ಚಾರಣಕ್ಕೆ ಮುಂದಾದೆವು,

ಮುಳ್ಳಯ್ಯನಗಿರಿ ಶಿಖರ ಕರ್ನಾಟಕ ರಾಜ್ಯದ ಅತಿ ಎತ್ತರದ ಶಿಖರ. ಇದು ಸಮುದ್ರ ಮಟ್ಟಕಿಂತ 6117ಅಡಿ ಎತ್ತರದಲ್ಲಿದೆ. ಶಿಖರದ ತುದಿಗೆ ತಲುಪಲು ಸುಮಾರು 505 ಮೆಟ್ಟಿಲುಗಳಿವೆ. ಚಾರಣಕ್ಕೆ ಹೇಳಿಮಾಡಿಸಿದ ಸ್ಥಳ. ಗಾಡಿಯಲ್ಲಿ ಬರುವವರಿಗೂ ಕಠಿಣ ಸವಾಲು ಒಡ್ಡುತ್ತದೆ. 505 ಮೆಟ್ಟಿಲುಗಳನ್ನೇರಿ ಮುಳ್ಳಯ್ಯನೆಂಬ ಸಿದ್ಧನೋರ್ವನ ದೇಗುಲದ ದರ್ಶನ ಪಡೆಯಬಹುದು. ಹಿಪ್ಪನಹಳ್ಳಿಯ ಎಸ್ಟೇಟ್ ಮಾಲೀಕರು ಈ ದೇವಸ್ಥಾನದ ಪೂರ್ಣ ಖರ್ಚನ್ನು ವಹಿಸಿಕೊಂಡಿದ್ದಾರೆ. ದೇವಸ್ಥಾನ ಕಟ್ಟಲು ಬೇಕಾದ್ದ ಸಾಮಗ್ರಿಗಳನ್ನು ಕತ್ತೆಗಳ ಸಹಾಯದಿಂದ ತರುತ್ತಾರೆ. ಈ ಶಿಖರದ ತುದಿಯಲ್ಲಿ ನಿಂತು ಸುತ್ತಮುತ್ತಲಿನ ನಿಸರ್ಗ ನೋಡಲು ಎರಡು ಕಣ್ಣುಗಳು ಸಾಲದು. ಸದಾ ಕಾಲ ತಂಪು ಗಾಳಿ ಬೀಸುವ ಇಲ್ಲಿಗೆ ಮಳೆಗಾಲದಲ್ಲಿ ಬರಲು ಅತಿ ಕಠಿಣವಾದ ಕಾಯಕ. ಪ್ರತ್ಯಕ್ಷ ಸಾಕ್ಷಿ ಪಚ್ಚಿ ಹೇಳುವುದು ಹೀಗೆ. "....ಗಾಡಿ ನಿಲ್ಲಿಸಿದ್ವಿ. ಗಾಳಿಗೆ ಗಾಡಿ ಎಲ್ಲಿ ಹಾರಿಹೋಗತ್ತೋ ಅಂತ ಗೊತ್ತಗುತ್ತಿರಲಿಲ್ಲ. ಆ ಮಟ್ಟಕ್ಕೆ ಗಾಳಿ...." ಮತ್ತೊಂದು ಸಾಕ್ಷಿ ಸೌಮ್ಯಶ್ರೀ ಹೇಳಿದ್ದು ".... ನನ್ನ ಗೆಳೆಯರನ್ನ ಮಳೆಗಾಲದಲ್ಲಿ ಕರೆದುಕೊಂಡು ಹೋಗಿದ್ದೆ. ಅಲ್ಲಿ ೫೦೦ ಮೆಟ್ಟಿಲು ಹತ್ತಿ ಹೋದರೆ ಅದೇ ಮುಳ್ಳಯ್ಯನಗಿರಿ ಅಂತ ಹೇಳಿದರೇ ಯರೂ ನಂಬಲೇ ಇಲ್ಲ..."

ಅಲ್ಲಿಂದ ವಾಪಸ್ ಹೋಗುವ ದಾರಿಯಲ್ಲಿ ಸೀತಾಳಯ್ಯನ ಮಠವಿದೆ. ಇಲ್ಲಿಂದ ಮುಂದೆ ನಾವು ಸಾಗಿದ್ದು ದತ್ತಪೀಠಕ್ಕೆ. ಇದನ್ನು ಮುಸಲ್ಮಾನರು ಬಾಬಾ ಬುಡನ್ ಗಿರಿ ಅಂತ ಹೆಸರಿಟ್ಟಿದ್ದಾರೆ, ಇಲ್ಲಿಯ ದತ್ತಾತ್ರೇಯ ದೇವಸ್ಥಾನಕ್ಕಾಗಲಿ, ದಾದಾ ಹಾಯತ್ ಖಾಲಂದರ್ ಗೋರಿಗಾಗಲಿ ಹೋಗಲು ನಿಷೇಧವಿದೆ. ದೂರದಿಂದಲೇ ನೋಡಿ ನಿಮ್ಮ ನಿಮ್ಮ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಇಲ್ಲಿಂದ ಮಾಣಿಕ್ಯಧಾರ, ಗಳಿಕೆರೆ ಅಬ್ಬಿಗಳು ಬಹಳ ಹತ್ತಿರ- ಸುಮಾರು ಐದಾರು ಕಿ.ಮಿ. ಇಲ್ಲಿ ಸದಾ ಕೊರೆಯುವ ನೀರು ನಿಮ್ಮನ್ನು ರಂಜಿಸುತ್ತವೆ, ದತ್ತಪೀಠಕ್ಕೆ ಬರುವ ಮುಂಚೆಯೇ ಅತ್ತಿಗುಂಡಿಯಲ್ಲೊಂದು ಚಿಕ್ಕ ಜಲಪಾತವಿದೆ. ಇಲ್ಲಿಯೇ ನಾವೆಲ್ಲರೂ ನೇರಳೆ ಹಣ್ಣುಗಳನ್ನು ಮೆದ್ದೆವು.

ದತ್ತಪೀಠದಿಂದ ಕೆಮ್ಮಣ್ಣಗುಂಡಿಗೆ 32 ಕಿ ಮಿ. ಅತ್ತಿಗುಂಡಿಯಿಂದ ಒಂದೆ ರಸ್ತೆ ದತ್ತಪೀಠಕ್ಕೆ, ಮತ್ತೊಂದು ಕೆಮ್ಮಣ್ಣಗುಂಡಿಗೆ ಹೋಗಲು ಇಬ್ಭಾಗವಾಗುತ್ತದೆ. ದತ್ತಪೀಠದಿಂದ ಕೆಮ್ಮಣ್ಣಗುಂಡಿಯ ರಸ್ತೆ ತೀರ ಹದಗೆಟ್ಟಿದೆ. 5 ಮೀಟರ್ ಅಗಲ ವಿರುವ ರಸ್ತೆಯಲ್ಲಿ ಎದುರಿನಿಂದ ಲಾರಿ ಬಂದಾಗ ಕಾರಿನಲ್ಲಿರುವ ನೀವು ಕಂಗಾಲಾಗಬೇಡಿ. ಕಾಡಿನ ಮಧ್ಯದಲ್ಲಿನ ಈ ರಸ್ತೆಯ ಎರಡು ಕಡೆಯಲ್ಲೂ ರಮ್ಯ ದೃಶ್ಯಗಳು ಕಾಣಸಿಗುತ್ತವೆ. ಭದ್ರಾ ಅಭಯಾರಣ್ಯದ ಬೋರ್ಡ್ ನೋಡಿದಾಗಲೆಲ್ಲಾ, ನೀವೊಬ್ಬರೇ ಆ ರಸ್ತೆಯಲ್ಲಿದ್ದಾಗ ಹೆದರಿಕೆಯಾಗದಿದ್ದರೆ " YOU ARE THE MAN!!!"

ಕೆಮ್ಮಣ್ಣಗುಂಡಿ ಸೇರುವ ಹೊತ್ತಿಗೆ ಸಂಜೆ ಎಂಟಾಗಿತ್ತು. ಬಂದ ರಸ್ತೆಯ ಪರಿಣಾಮವಾಗಿ ನಮ್ಮ ಗಾಡಿಗಳೂ ಇನ್ನೂ ಒಳ್ಳೆಯ condition ನಲ್ಲಿವೆಯೇ ಎಂದು ಖಾತ್ರಿ ಮಾಡಿಕೊಂಡೆವು. ಕೆಮ್ಮಣ್ಣಗುಂಡಿ ಒಂದು ಪೇಟೆ ಎಂದು ಭಾವಿಸಿದ್ದ ನಮಗೆ ಅದು ಸುಳ್ಳೆಂದು ಅರಿವಾಯಿತು. ಇಡಿಯ ಕೆಮ್ಮಣ್ಣಗುಂಡಿಯಲ್ಲಿ ನಿಮಗೆ ತಂಗಲು ಸಿಗಬಹುದಾದ ಲಾಡ್ಜ್ ಗಳೆಂದರೆ ಎರಡು ಐ.ಬಿ, ಒಂದೆರೆಡು ಟಿ.ಬಿ., ಒಂದು ಡಾರ್ಮಿಟರಿ, ಒಂದು ರಾಜ್ ಭವನ. ಎಲ್ಲವೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವವು. ಯಾವುದರಲ್ಲಿಯಾದರೂ ತಂಗಬೇಕಾದರೆ ತಿಂಗಳುಗಳ ಹಿಂದೆಯೇ Booking ಮಾಡಿರಬೇಕು. 3 ತಿಂಗಳ ಹಿಂದೆ ಬುಕ್ ಮಾಡಿದ ರಾಜ್ ಭವನ್ ಸಹಿತ ಕೆಲವೊಮ್ಮೆ ಸಿಗದೇ ಹೋಗಬಹುದು. ಆದ್ದರಿಂದ ಕೆಮ್ಮಣ್ಣಗುಂಡಿಯಲ್ಲಿ ತಂಗುವ plan ನೀವು ಅಲ್ಲಿಗೆ ಬರುವ ಮುಂಚೆಯೇ ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಇತರೇ ಹೊಟೆಲುಗಳೂ ಇಲ್ಲ. ಅಲ್ಲಲ್ಲಿ ಪೆಟ್ಟಿಗೆ ಅಂಗಡಿಗಳು; ಒಂದೇ ಹೊಟೆಲು (ಐ.ಬಿ ಟಿ.ಬಿ ಗಳಿಗೆ ಸಂಬಂಧ ಪಟ್ಟಿದ್ದು) ಕೆಮ್ಮಣ್ಣಗುಂಡಿಗೆ ತಲುಪುವುದೇ ತಡವಾದರೆ ಆ ದಿನ ನಿಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗಟ್ಟಿ. ಇಲ್ಲದಿದ್ದರೆ ಲಿಂಗದಹಳ್ಳಿ(20km) ಅಥವಾ ತರೀಕೆರೆ (36km) ಅಥವಾ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ. ನಮಗೂ ಇವೆಲ್ಲದರ ಮಾಹಿತಿ ಅಲ್ಲಿಗೆ ಹೋದಾಗಲೇ ತಿಳಿದದ್ದು. ಕಡೆಗಂತೂ ಕೈಕಾಲು ಹಿಡಿದಿದ್ದಕ್ಕೆ ಡಾರ್ಮಿಟರಿಯಲ್ಲಿ ಒಂದು ಕೋಣೆ ದೊರೆಯಿತು. ಆರು ಜನರಿಗೆ ನಾಲ್ಕು ಹಾಸಿಗೆ ಸಿಕ್ಕಿತು. ಆದಿನ ನೆಮ್ಮದಿಯಿಂದ ಊಟಮಾಡಿ ಮಲಗಿದೆವು. ಮಾರನೆಯ ದಿನದಂದು ಸೂರ್ಯೋದಯ ನೋಡಲು Z-pointಗೆ (ನಮ್ಮ ಡಾರ್ಮಿಟರಿಯಿಂದ 3ಕಿ.ಮಿ) ಅಥವಾ ಹೆಬ್ಬೆ ಜಲಪಾತ ನೋಡಲು 6 ಕಿ.ಮಿ ಚಾರಣ. ಇವೆರಡರಲ್ಲಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಏಕೆಂದರೆ ನಮ್ಮಲ್ಲಿ ಸಮಯ ಅಷ್ಟಿರಲಿಲ್ಲ. ಕಡೆಗೆ ಬೆಳಗಿನ ಜಾವ ೫:೦೦ ಗಂಟೆಗೆ Z point ಚಾರಣವೆಂದು ನಿರ್ಧಾರವಾಯಿತು. ಅತಿಸುಂದರವಾದ ಹೆಬ್ಬೆ ಜಲಪಾತವನ್ನು ಅನಿವಾರ್ಯ ಕಾರಣದಿಂದಾಗಿ ಕೈಬಿಡಬೇಕಾಯಿತು. ಹುಣ್ಣಿಮೆಯ ಬೆಳಕಿನಲ್ಲಿ ಕಾಡಿನ ನಡುವೆ ೩ ಕಿ.ಮಿ ನಡೆದು ಕರೆದುಕೊಂಡು ಹೋದವನು ಚರಣ್ ಎಂಬ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಹುಡುಗ. ಇದುವರೆಗೂ ಸಾಕಷ್ಟು ಸೂರ್ಯಾಸ್ತಮಾನ ವನ್ನು ಕಂಡಿದ್ದೇನೆ. ಸೂರ್ಯೋದಯ ಕಂಡಿದ್ದು ನಾನು ಎಂಟನೆಯ ಕ್ಲಾಸಿನಲ್ಲಿದ್ದಾಗ- ಕನ್ಯಾಕುಮಾರಿಯಲ್ಲಿ. ತದನಂತರ ಸೂರ್ಯೋದಯವಾಗಿ ಗಳಿಗೆಗಳ ನಂತರ ನಿದ್ದೆಯಿಂದ ಏಳುವ ಸಂಪ್ರದಾಯ ಬೆಳೆಸಿಕೊಂಡುಬಿಟ್ಟಿದ್ದೆ. ಇಲ್ಲಿಂದ ಸೂರ್ಯೋದಯ ಬಹಳ ಸುಂದರವಾಗಿ ಕಾಣುತ್ತದೆ. ಉಗಮಕ್ಕೂ ಅರ್ಧ ಗಂಟೆ ಮುಂಚಿತವಾಗಿಯೇ ಅಲ್ಲಿ ಸೇರಿದ್ದೆವು. ಒಂದಷ್ಟು ಛಾಯಚಿತ್ರಗಳನ್ನು ಸೆರೆಗಿಳಿಸಿ, ಸೂರ್ಯ ಉಗಮವಾಗುವ ವಿಹಂಗಮ ದೃಶ್ಯವನ್ನು ಕಂಡೆವು. Z ಆಕಾರದಲ್ಲಿ ಇಲ್ಲಿಯ ರಸ್ತೆಯನ್ನು ಮಾಡಲಾದ್ದರಿಂದ ಈ ಹೆಸರು ಈ ಶಿಖರಕ್ಕೆ. ಪೂರ್ವದಲ್ಲಿ ಲಿಂಗದ ಹಳ್ಳಿ, ಪಶ್ಚಿಮದಲ್ಲಿ Mines ಪರ್ವತ ಉತ್ತರ, ದಕ್ಷಿಣದಲ್ಲಿ ಇತರೆ ದೊಡ್ಡ ದೊಡ್ಡ ಗುಡ್ಡ ಬೆಟ್ಟಗಳು, ದಟ್ಟವಾದ ಶೋಲೇ ಕಾಡುಗಳುಬೆಳಗ್ಗಿನ ಹೊತ್ತಿನಲ್ಲಿ ತುಂಬ ಸುಂದರವಾಗಿ ಕಾಣುತ್ತದೆ. ಮಹಾರಾಜರಾದ ಕೃಷ್ಣರಾಜ ವೊಡೆಯರ್ ತಮ್ಮ ಬೇಸಿಗೆಯನ್ನು ಕಳೆಯುವ ಸಲುವಾಗಿ ಇಲ್ಲಿಗೆ ಬರುತ್ತಿದ್ದರಂತೆ. ಆ ಕಾರಣದಿಂದಲೇ ಕೆಮ್ಮಣ್ಣಗುಂಡಿಗೆ ಕೆ ಆರ್ ಹಿಲ್ಸ್ ಎಂಬ ಹೆಸರೂ ಇದೆ. ತಣ್ಣಗೆ ಬೀಸುವ ಗಾಳಿ ನಿಮ್ಮನ್ನು ಅಲ್ಲಿಂದ ಎಲ್ಲಿಗೂ ಹೋಗುವುದೇ ಬೇಡವೆನ್ನುವಂತೆ ವಶೀಕರಿಸುತ್ತದೆ. ಇಲ್ಲಿಂದಲೇ ಸೂರ್ಯಾಸ್ತಮಾನ ದೃಶ್ಯವೂ ಸುಂದರವಾಗಿ ಕಾಣುತ್ತದೆಂದು ಹೇಳುತ್ತಾರಾದರೂ ನಾವದನ್ನು ವೀಕ್ಷಿಸಿರಲಿಲ್ಲ. ನಮ್ಮ ಮುಂದಿನ ಪ್ರಯಾಣದ ಅನುವಾಗಿ ನಾವು ಅಲ್ಲಿಂದ ಹೊರಡಬೇಕಾಯಿತು. ವಾಪಸ್ ಬರುವ ದಾರಿಯಲ್ಲೇ ಸುಮಾರು 30ಅಡಿ ಎತ್ತರ ದಿಂದ ಧುಮುಕುವ ಶಾಂತಿ ಜಲಪಾತದಲ್ಲೂ ಸ್ವಲ್ಪ ಕಾಲ ಕಳೆದೆವು. ಮಳೆಗಾಲದಲ್ಲಿ ಇಂತಹ ಸುಮಾರು ಜಲಪಾತಗಳು ನಮಗೆ ದೊರಕುವವು ಎಂದು ಚರಣ್ ಆಗಾಗ್ಯೆ ಹೇಳುತ್ತಿದ್ದ. ಅಲ್ಲಿಂದ ರಾಜ್ ಭವನ್ ಹತ್ತಿರವೇ ಇದ್ದ "Rock Garden" ಗೆ ಹೋಗಿ ಸ್ವಲ್ಪ ಕಾಲ ಕಳೆದೆವು.

ಮುಂದಿನ ನಮ್ಮ ಪ್ರಯಾಣ ಕಲ್ಹತ್ತಿ ಜಲಪಾತಕ್ಕೆ(10km). ಇಲ್ಲಿಗೆ ಬಂದೊಡನೆಯೇ ಹತಾಶರಾದೆವು. ಸುಮಾರು 10 ಅಡಿಯಿಂದ ನೀರು ಬೇಳುವುದೇನೋ ಕಂಡಿತು, ನಮ್ಮ ಮನೆಯ ಶವರ್ ನೆನಪಾಗುತ್ತಿತ್ತು. ಅಲ್ಲಿದ್ದ ವೇರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೇನೋ ಭೇಟಿ ಕೊಟ್ಟೆವು. ಆದರೆ ಆ ಕಲ್ಹತ್ತಿ ಜಲಪಾತದ ಉಗಮಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ನಮ್ಮ ಪ್ರಯಾಣವೆಲ್ಲಾ ಮುಗಿದ ಮೇಲೆ ಮನೆಗೆ ಬಂದ ಮೇಲೆ ಗೆಳೆಯ ಯಶವಂತ್ ವಿವರಿಸಿದ ನಂತರ ತಿಳಿದದ್ದು ನಾವಿನ್ನು 3 ಕಿ.ಮಿ Trek ಮಾಡಿದ್ದರೆ ನಮಗಂದು ಮನೋಹರವಾದ ಜಲಪಾತ ಕಾದಿತ್ತೆಂದು. ಆದ್ದರಿಂದ ಕಲ್ಹತ್ತಿ ಜಲಪಾತಕ್ಕೆ ಹೋಗುವುದಾದರೆ ಅಲ್ಲಿನ ಚಾರಣವನ್ನು ಸಹ ವಿಚಾರಿಸಿಕೊಳ್ಳಿ. ಇಲ್ಲಿನ ಜಲಪಾತದಲ್ಲಿ ಸ್ನಾನ ಮಾಡಿದವರಿಗೆ ಎಲ್ಲ ರೋಗಗಳಿಂದ ಮುಕ್ತಿ ದೊರೆಯುತ್ತದೆಂಬ ನಂಬಿಕೆ ಇದೆ. ಕಾಡಿನ ಔಷಧೀಯ ಗಿಡಗಳನ್ನು ಬಳಸಿ ಹರಿದು ಬರುವ ಈ ನೀರಿಗೆ ರೋಗನಿರೋಧಕ ಶಕ್ತಿ ಇರಲಿಕ್ಕು ಸಾಕು.


ನಂತರ ಲಿಂಗದಹಳ್ಳಿ ಚಿಕ್ಕಮಗಳೂರು ಮಾರ್ಗವಾಗಿ ಶೃಂಗೇರಿ ಗೆ ಬಂದೆವು. ಹೊಟೇಲ್ ಒಂದರಲ್ಲಿ ತಂಗಿ ಮಾರನೆಯ ಬೆಳಿಗ್ಗೆ ತಾಯಿ ಶಾರದಾಂಬ, ವಿದ್ಯಾ ಶಂಕರ ದೇವಸ್ಥಾನಗಳಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳನ್ನು ಹಾಕಿ ಸಿರಿಮನೆ ಜಲಪಾತಕ್ಕೆ ತೆರಳಿದೆವು.ಸಿರಿಮನೆ ಜಲಪಾತ ಶೃಂಗೇರಿಯಿಂದ ೧೫ ಕಿ.ಮಿ. ನೆಮ್ಮಾರ್ ಎಂಬ ಊರಿನಿಂದ ಋಷ್ಯಶೃಂಗ ದೇವಸ್ಥಾನ ಮಾರ್ಗವಾಗಿ ೧೩ ಕಿ.ಮಿ. ಸಿರಿಮನೆ ಜಲಪಾತವನ್ನು ಕಿಗ್ಗ ಜಲಪಾತವೆಂದೂ ಕರೆಯುತ್ತಾರೆ. ಸದಾ ಕೊರೆಯುವ ನೀರಿನಲ್ಲಿ ನಾವು ಆಟಾಡಿದೆವು. ಸಿರಿಮನೆ ಜಲಪಾತದಲ್ಲಿ ನೀರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಶೃಂಗೇರಿಯಿಂದ ಕಿಗ್ಗದ ವರೆಗೆ ರಸ್ತೆ ಚೆನ್ನಾಗಿದೆ. ಅಲ್ಲಿಂದ ಜಲಪಾತದ ವರೆಗೆ ಇತ್ತೀಚೆಗೆ "ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ" ಅಡಿ ರಸ್ತೆ ಕಾಮಗಾರಿ ನಡೆಯುತ್ತಿದೆ.ಅಲ್ಲಿಯೇ ಹತ್ತಿರ ದಲ್ಲಿ ಮಘೇಬೈಲು ಜಲಪಾತವಿದೆ. ಈ ಎರಡು ಜಲಪಾತಗಳು ನಕ್ಸಲ್ ಪೀಡಿತ ಪ್ರದೇಶವೆನ್ನುತಾರಾದರೂ ಅಲ್ಲಿಗೆ ಹೋಗಲೂ ಯಾರೂ ಹಿಂಜರಿಯುವುದಿಲ್ಲ. ಮಘೇಬೈಲು ಜಲಪಾತದವರೆಗೂ ರಸ್ತೆ ಇಲ್ಲ. ಆ ಹಳ್ಳಿಯ ತೋಟದ ಕೆಲಸದವರೋ ಪರಿಚಿತರೋ ನಿಮ್ಮೊಟ್ಟಿಗಿದ್ದರೆ ಈ ಜಲಪಾತವನ್ನೂ ನೋಡಲು ಹೋಗಬಹುದು. ಕಾಡಿನಲ್ಲೇ ಐದಾರು ಕಿ.ಮಿ. Trek ಮಾಡಿ ಹೋಗಬೇಕೆಂದು ಮಘೇಬೈಲಿನ ಗ್ರಾಮಸ್ಥನೋರ್ವನು ತಿಳಿಸಿದನು. ಪುನಃ ಸಮಯದ ಅಭಾವದಿಂದಾಗಿ ಈ ಜಲಪಾತಕ್ಕೂ ಹೋಗಲಾಗಲಿಲ್ಲ. ತದನಂತರ ಶೃಂಗೇರಿಯಿಂದ ಕೆರೆಕಟ್ಟೆ ಮಾಳ ಘಾಟ್ ಕಾರ್ಕಳವಾಗಿ ಮನೆ ಸೇರಿದೆವು. ಎರಡು ದಿನಗಳ ಪ್ರವಾಸ ಮೂರು ದಿನಗಳಿಗೆ ವಿಸ್ತೃತವಾಗಿತ್ತು.

ಇಷ್ಟೇ ಅಲ್ಲದೇ ಹೊಯ್ಸಳ ಖಾತಿಯ "ಸಳ" ನ ಜನ್ಮಸ್ಥಳವಾದ ಅಂಗಡಿ, ಬೆಳವಾಡಿಯ ವೀರನಾರಾಯಣ ದೇವಸ್ಥಾನ ಅಮೃತಪುರದ ಅಮೃತೇಶ್ವರ ದೇವಸ್ಥಾನ ಖಾಂಡ್ಯದ ಮಾರ್ಖಂಡೇಶ್ವರ ಮತ್ತು ಜನಾರ್ಧನ ದೇವಸ್ಥಾನಗಳು ಹಿರೇಮಗಳೂರಿನ ಕೋದಂಡರಾಮನ ದೇವಸ್ಥಾನ ಕಳಸ (ದಕ್ಷಿಣ ಕಾಶಿ) ಯ ಕಳಸೇಶ್ವರ ದೇವಸ್ಥಾನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ದೇವನೂರಿನ ಲಕ್ಷ್ಮೀಕಾಂತ ದೇವಸ್ಥಾನ, ಮಾರ್ಲೆಯ ಚೆನ್ನಕೇಶವ ದೇವಸ್ಥಾನ ಎಲ್ಲವೂ ಸುಂದರವಾದವುಗಳೇ. ಅಷ್ಟೇ ಅಲ್ಲದೆ ಕುದುರೆಮುಖ ಅರಣ್ಯವನ, ಅಲ್ಲಿನ ಕಡುಗಳಲ್ಲಿನ ಚಾರಣ, ಮುಥೋಡಿಯಲ್ಲಿರುವ ವನ್ಯಮೃಗಗಳ ಅಭಯಾರಣ್ಯ ಎಲ್ಲವೂ ನಿಮ್ಮನ್ನು ಕೈಬೀಸಿ ಕರೆಯುತ್ತವೆ. (ಬಾಳೆಹೊನ್ನೂರಿನ ಬಳಿ ಇರುವ ತೋರಣಮಾವಿನಿಂದ 35 ಕಿಮಿ) ಒಟ್ಟಿನಲ್ಲಿ ಹೇಳುವುದಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಕ್ಕೆ ತಕ್ಕ ತಾಣಗಳು ಬಹಳಷ್ಟಿವೆ. ಮಧುಚಂದ್ರಕ್ಕೆ ನವದಂಪತಿಗಳು ಕೇವಲ ಕೇರಳಕ್ಕೆ ಏಕೆ ಹೋಗುತ್ತರೆಂಬುದಕ್ಕೆ ಕಾರಣ ತಿಳಿಯುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಒಳ್ಳೆಯ ರಸ್ತೆಗಳನ್ನು ಸರ್ಕಾರ ದಯಪಾಲಿಸಿದರೆ, ಬಹಳಷ್ಟು ಹೊಟೇಲು-ಲಾಡ್ಜ್ ಗಳಿಗೆ ಅನುಮತಿ ಸಿಕ್ಕಿದರೆ ಕೇರಳಕ್ಕಿಂತಲೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುವುದು ಖಂಡಿತ. ಪ್ರವಾಸೋದ್ಯಮ ಇಲಾಖೆಯೂ ಲಾಭಮಾಡುವುದರಲ್ಲಿ ಸಂಶಯವಿಲ್ಲ.