Wednesday, March 25, 2009

ತೀರ್ಥಹಳ್ಳಿ - ಕುಪ್ಪಳ್ಳಿ
















ಶಿವಮೊಗ್ಗ ಕರ್ನಾಟಕದ ಪ್ರತಿಷ್ಟಿತ ಜಿಲ್ಲೆಗಳಲ್ಲಿ ಒಂದು. ಸಾಗರ, ತೀರ್ಥಹಳ್ಳಿ, ಹೊಸನಗರ, ಸರ್ವರೀತಿಯಲ್ಲೂ ಹೆಸರು ಮಾಡಿರುವ ತಾಲೂಕುಗಳು. ನನ್ನ ಇತ್ತೀಜಿಗಿನ ಪ್ರವಾಸ ಕುಪ್ಪಳ್ಳಿಗೆ. ತೀರ್ಥಹಳ್ಳಿ ನನಗೆ ಹೊಸ ಊರೇನೂ ಅಲ್ಲ. ತೀರ್ಥಹಳ್ಳಿ ತಾಲೂಕಿನ ಒಂದು ಕುಗ್ರಾಮ - ಕೊಳವಳ್ಳಿ. ಇದು ನನ್ನ ತಂದೆಯ ತವರು ಮನೆ. (ಆದ್ದರಿಂದಲೇ ನನ್ನ ಅಂಕಿತದ ಎರಡನೆಯ ಅಕ್ಷರ ಕೊ). ಬೇಸಿಗೆಯ ಅರ್ಧ ರಜೆ ಕಳೆಯಲು ಇಲ್ಲಿಗೆ ಬರುತ್ತಲೇ ಇದ್ದೆ. (ಏಕೆಂದರೆ ಮೊದಲರ್ಧದ ರಜೆ ತಾಯಿಯ ತವರು ಮನೆಯಾದ ಹರಿಹರದಲ್ಲಿ ಕಳೆಯುತ್ತಿದ್ದೆ.)

ತೀರ್ಥಹಳ್ಳಿಯ ಸುತ್ತಮುತ್ತಲೂ ನೋಡಬಹುದಾದಂತಹ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿವೆ. ಆಗುಂಬೆ, ಹುಂಚ, ಅಂಬುತೀರ್ಥ, ಮೃಗವಧೆ ಹಲವಾರು ಅಂತಹ ಸ್ಥಳಗಳಲ್ಲಿ ಮೊದಲವುಗಳು. ಅದಲ್ಲದೇ ಮತ್ತೂ ಕೆಲವು ಸ್ಥಳಗಳು ಹೆಚ್ಚೇನೂ ಹೆಸರು ಮಾಡದೆ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ. ಎರಡನೆಯ ರಾಷ್ಟ್ರಕವಿ ಕು.ವೆಂ.ಪುರವರ ಜನ್ಮಸ್ಥಳವಾದ ಕುಪ್ಪಳ್ಳಿಯ ಅಲಂಕೃತ ಮನೆ, ನಗರ-ಕವಲೇದುರ್ಗಗಳಲ್ಲಿನ ನಾಯಕ ವಂಶಸ್ಥರಾಳಿದ ಕೋಟೆಗಳು, ತೀರ್ಥಹಳ್ಳಿಯ ತುಂಗಾ ನದಿ, ಚಿಪ್ಪಲುಗುಡ್ಡೆ, ಕುಂದಾದ್ರಿ ಬೆಟ್ಟ ಇನ್ನೂ ಇತರೆ. ಮೇಲ್ಕಂಡ ಎಲ್ಲ ಕ್ಷೇತ್ರಗಳನ್ನು ನಾನು ನೋಡಿದ್ದೇನಾದರೂ ಇವೆಲ್ಲದರ ಮಾಹಿತಿಯನ್ನು ಈ ಲೇಖನದಲ್ಲಿ ನಾನು ಪ್ರಕಟಿಸಲಾರೆ. ಕಾಲಕೂಡಿಬಂದಾಗ ಉಳಿದೆಲ್ಲವುಗಳ ಬಗ್ಗೆ ಬರೆಯುತ್ತೇನೆ. ಕ್ಷಮೆ ಇರಲಿ.


ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಹಿರಿಯಡ್ಕ (9)- ಪೆರಡೂರು (15)- ಹೆಬ್ರಿ (29)- ಸೋಮೇಶ್ವರ (39)- ಆಗುಂಬೆ (49)- ತೀರ್ಥಹಳ್ಳಿ(81)- ಕುಪ್ಪಳ್ಳಿ (97)- ಕೊಪ್ಪ(108)


ಮಣಿಪಾಲದಿಂದ ಆಗುಂಬೆ ಘಾಟಿ ಎಡೆಗೆ ಹೊರಡಬೇಕು, ಮಣಿಪಾಲದಿಂದ ಪರ್ಕಳ... ಅಲ್ಲಿಂದ ನಾಲ್ಕೈದು ಕಿ.ಮಿ. ನಂತರದ ಊರೇ ಹಿರುಯಡ್ಕ. ಹಿರಿಯಡ್ಕದಿಂದ ನೇರ ರಸ್ತೆ ಕಾರ್ಕಳಕ್ಕೆ ಕರೆದೊಯ್ಯುತ್ತೆ. ಎಡಗಡೆಯ ವಿಶಾಲವಾದ ರಸ್ತೆ ಪೆರಡೂರು ಹೆಬ್ರಿ ಮಾರ್ಗವಾಗಿ ಸೋಮೇಶ್ವರಕ್ಕೆ ದಾರಿ ಮಾಡಿಕೊಡುತ್ತದೆ. ಪೆರಡೂರಿನ ಅನಂತಪದ್ಮನಾಭ ದೇವಸ್ಥಾನ ಅಲ್ಲಿನ ಬಸ್ ಸ್ಟಾಪ್ ಹತ್ತಿರವೇ ಇದೆ. ದರ್ಶನದಲ್ಲಿ ಆಸಕ್ತಿ ಇಲ್ಲವಾದರೆ ಹೆಬ್ರಿಗೆ ಹೊರಡಿ. ಅಲ್ಲಿಂದ ಸೋಮೇಶ್ವರಕ್ಕೆ. ಸೋಮೇಶ್ವರದಲ್ಲಿ ಸೀತಾ ನದಿ ಇದೆ. ಸೀತಾ ನದಿಯ ಜಲಪಾತವೂ ಇದೆ. ಎರಡೂ ನಿಮಗೆ ಒಳ್ಳೆಯ Trek ನೀಡಬಲ್ಲವುಗಳಾಗಿವೆ; ಹೆಬ್ರಿಯಿಂದ ಸೋಮೇಶ್ವರದವರೆಗೂ ರಸ್ತೆ ಸಿಕ್ಕಾಪಟ್ಟೆ ಹದಗೆಟ್ಟಿದೆ. ದ್ವಿಚಕ್ರ ವಾಹನದವರಿಗೆ ಮರ್ಯಾದೆಯೇ ಇಲ್ಲ!!!! ಎದುರುಗಡೆ ಬಸ್, ಲಾರಿ ಬಂದರೆ ನಮ್ಮ ದ್ವಿಚಕ್ರ ವಾಹನಗಳಿಗೆ ಆಸ್ಪದವೇ ಇಲ್ಲದಂತಾಗುತ್ತದೆ. ಸೋಮೇಶ್ವರದಿಂದ ಆಗುಂಬೆ ಘಾಟಿಯ ರಸ್ತೆ. ತೀಕ್ಷ್ಣ ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ಗಾಡಿ ಚಲಿಸುವುದು ಅಷ್ಟು ಸುಲಭವಲ್ಲ. 10 ಕಿ.ಮಿ. ಘಾಟಿ ರಸ್ತೆಯಬಳಿಕ ನಿಮಗೆ ಕಾಣಸಿಗುವುದು ಜಗತ್ಪ್ರಸಿದ್ಧ ಆಗುಂಬೆ. ಮಳೆಗಾಲದಲ್ಲಿ ಅತಿಯಾದ ಮಳೆ ಸುರಿಯುವುದರಿಂದ ದಕ್ಷಿಣ ಚೀರಾಪುಂಜಿಯಂತಲೂ ಆಗುಂಬೆಯನ್ನು ಕರೆಯುವುದುಂಟು. ಇಲ್ಲಿಂದಲೇ ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಾಣಬಹುದು. ನಮ್ಮಪ್ಪನ ಬಿಟ್ಟಿ ಸಲಹೆ - "ನವೆಂಬರ್ ನಿಂದ ಫ಼ೆಬ್ರವರಿಯವರೆಗೂ ಮೋಡಗಳಿಲ್ಲದಿರುವುದರಿಂದ ಸೂರ್ಯಾಸ್ತಮಾನ ಚೆನ್ನಾಗಿ ಕಾಣುತ್ತದೆ" ಎಂದು. ಆಗುಂಬೆಯ ಸಮೀಪವೇ ಒನಕೆಅಬ್ಬಿ ಜಲಪಾತ ಹಾಗು ಬರ್ಕಣ ಜಲಪಾತಗಳಿವೆ. ಇವೆರಡೂ ನಕ್ಸಲರ ಅಡಗುತಾಣವಾಗಿದೆ ಎಂದು ಹೇಳಲಾಗುತ್ತಿದೆ. ಆಗುಂಬೆಯಿಂದ ಚಿಕ್ಕಮಗಳುರಿನ ಕೊಪ್ಪ (35km), ಎನ್ ಆರ್ ಪುರ, ಶೃಂಗೇರಿ, ಹೊರನಾಡು ಹೋಗಲೂ ಒಂದು ರಸ್ತೆ, ತೀರ್ಥಹಳ್ಳಿ ಶಿವಮೊಗ್ಗಕ್ಕೆ ಹೋಗಲು ರಾಜ್ಯ ಹೆದ್ದಾರಿ SH-1 ಇದೆ. ತೀರ್ಥಹಳ್ಳಿಯ ರಸ್ತೆಯಲ್ಲಿ ಹೋಗುವಾಗ ದಿ ಶಂಕರ್ ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ನ ನೆನಪಾಗುತ್ತದೆ. ಆ ಶಾಲೆ, ಸ್ವಾಮಿಯ ಮನೆ, ಆ ಅಂಚೆ ಕಚೇರಿ ಎಲ್ಲವೂ ಇಂದಿಗೂ ಹಾಗೆಯೇ ಇದೆ ಎಂದೆನಿಸುತ್ತದೆ.

31 ಕಿ ಮಿ ಪ್ರಯಾಣದ ನಂತರ ತೀರ್ಥಹಳ್ಳಿ ಸಿಗುತ್ತದೆ. ಇಲ್ಲಿಂದಲೇ ನಗರ, ಹೊಸನಗರ, ಸಾಗರ, ಕುಪ್ಪಳ್ಳಿ, ಮೃಗವಧೆ ಎಲ್ಲದಕ್ಕೂ ಹೋಗಲೂ ಅನುಕೂಲಕರ ರಸ್ತೆಗಳಿವೆ. ನಾನು ಕೊಪ್ಪಕ್ಕೆ ಹೋದದ್ದು ತೀರ್ಥಹಳ್ಳಿ ಕುಪ್ಪಳ್ಳಿ ಮಾರ್ಗವಾಗಿ. ಸಾಧರಣ 28 ಕಿಮಿ ಹೆಚ್ಚು ಪ್ರಯಾಣ ಮಾಡಿದಂತಾಗುತ್ತದೆ. ಆದರೆ ಈ ರಸ್ತೆಯಲ್ಲಿ ಬರುವಾಗ ನಿಮಗೆ ಸಿಗುವ ಕುಪ್ಪಳ್ಳಿ ಎಂಬ ಪುಟ್ಟ ಊರು ಕು.ವೆಂ.ಪು ರವರು ಬೆಳೆದ ಊರು. ಶ್ರೀ ಎಸ್. ಎಂ. ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ ಕು.ವೆಂ.ಪು ರವರ ಮನೆಯನ್ನು ಒಂದು ವಸ್ತುಸಂಗ್ರಹಾಲಯ, ಅಧ್ಯಯನ ಕೇಂದ್ರವನ್ನಾಗಿಸಲೋಸುಗ ಈ ಬೃಹತ್ ಕೆಲಸವನ್ನು ಮಾಡಿಸಿದ್ದಾರೆ, ಸಾಧಾರಣ ಒಂದು ಕೋಟಿಯವರೆಗೂ ಖರ್ಚು ಮಾಡಿಸಿ ಈ ಕಾರ್ಯ ಸಂಪೂರ್ಣವಾಗಿಸಿದ್ದಾರೆ. ಕು.ವೆಂ.ಪು ರವರ ಹಳೆಯ ಕಾಲದ ಮನೆಯನ್ನು ಜೀರ್ಣೋದ್ಧಾರ ಮಾಡಿ, ವಸ್ತುಸಂಗ್ರಹಾಲಯ, ಗ್ರಂಥಾಲಯವಾಗಿ ನಿರ್ಮಿಸಲಾಗಿದೆ. ಎರಡು ಅಂತಸ್ತಿನ ಈ ಮನೆ ಹಳೆಯಕಾಲದ ಚೌಕಿ ಮನೆ. ಅಡಿಗೆಮನೆ, ಬಾಣಂತಿಕೋಣೆ, ನಡುಮನೆ, ಅಂಗಳ ಎಲ್ಲವನ್ನೂ ಕೂಡಿರುವ ಈ ಮನೆಯಲ್ಲಿ ಹಳ್ಳಿಯ ಮನೆಗಳಲ್ಲಿ ಉಪಯೋಗಿಸುವ ಎಲ್ಲಾ ತರಹದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹಲವೆಲ್ಲಾ ಕು.ವೆಂ.ಪು ಮನೆಯಲ್ಲೆ ಉಪಯೋಗಿಸುತ್ತಿದ್ದವುಗಳಾಗಿವೆ. ಉದಾಹರಣೆಗೆ ಅಡಿಗೆಮನೆಗಳಲ್ಲಿ ಬಳಸುವ ಶ್ಯಾವಿಗೆ ಒರಳುಗಳು, ಚಕ್ಕುಲಿ ಒರಳುಗಳು ದೊಡ್ಡ ದೊಡ್ಡ ಕೊಳಗಗಳು - ನೀರು ಹಿಡಿದಿಡಲು, ಅನ್ನ ಮಾಡುವ ಕಲ್ಗಡಿಗೆಗಳು - ಕಂಚಿನದ್ದು ಹಾಗು ಬಳಪದ್ದು, ನೀರು ಕಾಯಿಸುವ ಹಂಡೆಗಳು, ಅಡಿಕೆ ಬೇಯಿಸುವ ಹಂಡೆಗಳು, ದೋಸೆ ಮಾಡುವ ಹಂಚುಗಳು, ಕಡಬು ಮಾಡುವ ಸರಗೋಲು, ಬೆತ್ತದ ಜರಡಿಗಳು, ಭತ್ತದ ಫಣತಗಳು (ಕಣಜಗಳು), ನೀರಿನ ಬಾನಿಗಳು, ತೋಟ, ಹೊಲ, ಗದ್ದೆಗಳಲ್ಲಿ ರೈತರು ಬಳಸುವ ಕತ್ತಿ, ಅರಗತ್ತಿ, ದೋಟಿ, ನೇಗಿಲು ನೊಗ, ಕಂಬಳಿ ಗೊಪ್ಪೆ, ಹಾಳೆ ಟೊಪ್ಪಿಗೆ, ಕೋವಿ,ದರಗೆಲೆ ತುಂಬುವ ಜಲ್ಲೆ, ನೇಗಿಲು, ಮೀನು ಹಿಡಿಯುವ ಕೂಣಿ ...........


ಉಪ್ಪರಿಗೆಯ (ಮೊದಲನೆಯ, ಎರಡನೆಯ ಅಂತಸ್ತನ್ನು ಉಪ್ಪರಿಗೆಯೆನ್ನುತ್ತಾರೆ ಕೋಣೆಗಳಲ್ಲಿ ಕುವೆಂಪು ರವರ ಅಪರೂಪದ ಭಾವಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ, ಕನ್ನಡಕ, ಗಡಿಯಾರ, ಗಾಂಧಿ ಟೋಪಿ, ಬಿಳಿ ಪಂಚೆ, ಊರುಗೋಲು, ಕುರ್ಚಿ, ಇವೆಲ್ಲವೂ ಇಲ್ಲಿವೆ. ಕುವೆಂಪು ರವರ ಕೇಷವನ್ನೂ ಇರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದಾಗಿನ ಭಾವಚಿತ್ರಗಳು ಅವರಿಗೆ ಸಿಕ್ಕ ಪ್ರಶಸ್ತಿ ಪತ್ರಗಳು, ಪದಕಗಳು - ಜ್ನಾನಪೀಠ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್, ಎಲ್ಲವೂ ಅಲ್ಲಿ ಪ್ರದರ್ಶಿತ. ಅಲ್ಲಲ್ಲಿ ಕುವೆಂಪು ರವರ ಸುಂದರ ಕವನಗಳನ್ನು ಗೋಡೆಗಳ ಮೇಲೆ ಪ್ರದರ್ಶಿಸಿದ್ದಾರೆ. ಶಾಂತ ವಾತವರಣದಿಂದ ಕೂಡಿದ ಈ ಮನೆಯ ಪಕ್ಕದಲ್ಲೇ ಅಡಿಕೆಯ ತೋಟವಿದೆ. ಮನೆಯಿಂದ ಕಾಲ್ನಡಿಗೆ ದೂರದಲ್ಲಿ ಒಂದು ರಮ್ಯ ತಾಣವಿದೆ. ಅದೇ ಕವಿಶೈಲ. ಕುವೆಂಪುರವರು ತಮ್ಮ ಬಾಲ್ಯದ ದಿನಗಳಲ್ಲಿ ಇಲ್ಲಿಗೇ ಬಂದು ಕವನಗಳನ್ನು ಬರೆಯುತ್ತಿದ್ದರಂತೆ, ಇಲ್ಲಿಂದ ಪಶ್ಚಿಮ ಘಟ್ಟಗಳು ಬಹುಸುಂದರವಾಗಿ ಕಾಣುತ್ತದೆ. ಸೂರ್ಯಾಸ್ತಮಾನವೂ ಮನೋಹರವಾಗಿರುತ್ತದೆಂದು ಅಲ್ಲಿಯ ಮಾರ್ಗದರ್ಶಕ ತಿಳಿಸಿದನು,
ಕವಿಶೈಲದ ಬಗ್ಗೆ ಕು.ವೆಂ.ಪು ರವರ ವರ್ಣನೆ " ಓ ಕವಿಶೈಲ,........ ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ? ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ"


೧೬-೫-೩೬ ರಂದು ತಿ.ನಂ. ಶ್ರೀಕಂಠಯ್ಯ, ಬಿ.ಎಂ. ಶ್ರೀಕಂಠಯ್ಯ, ಕು.ವೆಂ. ಪುಟ್ಟಪ್ಪನವರ ಮನೆಗೆ ಬಂದಾಗ ಅಲ್ಲಿಯ ಒಂದು ಗುಡ್ಡದ ಮೇಲೆ ಆ ನೆನಪಿಗೋಸ್ಕರ ತಮ್ಮ ಹೆಸರುಗಳನ್ನು ಕೆತ್ತಿದ್ದಾರೆ. ಅಲ್ಲಿ ಪೂಚಂತೆಯ ಹೆಸರೂ ಮೂಡಿದೆ. ಪುಟ್ಟ ಮಗುವಾಗಿದ್ದ ಅವರೂ ತಂದೆಯೊಟ್ಟಿಗೆ ಅಲ್ಲಿಗೆ ಹೋಗಿದ್ದರೇನೋ...... ಕು.ವೆಂ.ಪು ರವರ ಸಮಾಧಿಯೂ ಅವರು ಹೆಚ್ಚಾಗಿ ಇಷ್ಟಪಡುತ್ತಿದ್ದ ಕವಿಶೈಲದಲ್ಲಿ. ತೆಜಸ್ವಿಯರೂ ಅಲ್ಲೇ ಹತ್ತಿರದ ಜಾಗದಲ್ಲೇ ಸೇರಿಕೊಂಡಿದ್ದಾರೆ.


ಕುಪ್ಪಳ್ಳಿಯಿಂದ ಕೊಪ್ಪ ಸುಮಾರು 11 ಕಿಮಿ. ಕೊಪ್ಪದ ಸುತ್ತಲೂ ಮತ್ತೊಮ್ಮೆ ಯಾವಾಗಲಾದರೂ ವಿಹಾರರ್ಥಕ್ಕೆ ಹೋದಾಗ ಅದರ ಬಗ್ಗೆ ಲೇಖನವನ್ನು ನೀವು ನಿರೀಕ್ಷಿಸಬಹುದು. ಕವಲೆದುರ್ಗ, ಕೊಳವಳ್ಳಿಯ ಬಗ್ಗೆ ನನ್ನ ಮುಂದಿನ ಲೇಖನ. ಊಟ ತಿಂಡಿಗಾಗಿ ನಿಮಗೆ ತಾರಾ ಹೋಟೆಲುಗಳಿಲ್ಲ ಆದರೂ ಕಾಫಿ ಚಹಾ ಸಿಗಲು ಸಣ್ಣಪುಟ್ಟ ಹೊಟೇಲುಗಳಿವೆ, ಆಗುಂಬೆ, ತೀರ್ಥಹಳ್ಳಿ, ಕೊಪಗಳಲ್ಲಿ ಟಿ.ಬಿ ಗಳಿವೆ; ಲಾಡ್ಜ್ ಗಳೂ ಇವೆ.

ನಿಮಗೆ ಸುಖ ಪ್ರಯಾಣ ಕೋರುವ,

ಪ್ರ ಕೊ ಪ