Wednesday, March 25, 2009

ತೀರ್ಥಹಳ್ಳಿ - ಕುಪ್ಪಳ್ಳಿ
















ಶಿವಮೊಗ್ಗ ಕರ್ನಾಟಕದ ಪ್ರತಿಷ್ಟಿತ ಜಿಲ್ಲೆಗಳಲ್ಲಿ ಒಂದು. ಸಾಗರ, ತೀರ್ಥಹಳ್ಳಿ, ಹೊಸನಗರ, ಸರ್ವರೀತಿಯಲ್ಲೂ ಹೆಸರು ಮಾಡಿರುವ ತಾಲೂಕುಗಳು. ನನ್ನ ಇತ್ತೀಜಿಗಿನ ಪ್ರವಾಸ ಕುಪ್ಪಳ್ಳಿಗೆ. ತೀರ್ಥಹಳ್ಳಿ ನನಗೆ ಹೊಸ ಊರೇನೂ ಅಲ್ಲ. ತೀರ್ಥಹಳ್ಳಿ ತಾಲೂಕಿನ ಒಂದು ಕುಗ್ರಾಮ - ಕೊಳವಳ್ಳಿ. ಇದು ನನ್ನ ತಂದೆಯ ತವರು ಮನೆ. (ಆದ್ದರಿಂದಲೇ ನನ್ನ ಅಂಕಿತದ ಎರಡನೆಯ ಅಕ್ಷರ ಕೊ). ಬೇಸಿಗೆಯ ಅರ್ಧ ರಜೆ ಕಳೆಯಲು ಇಲ್ಲಿಗೆ ಬರುತ್ತಲೇ ಇದ್ದೆ. (ಏಕೆಂದರೆ ಮೊದಲರ್ಧದ ರಜೆ ತಾಯಿಯ ತವರು ಮನೆಯಾದ ಹರಿಹರದಲ್ಲಿ ಕಳೆಯುತ್ತಿದ್ದೆ.)

ತೀರ್ಥಹಳ್ಳಿಯ ಸುತ್ತಮುತ್ತಲೂ ನೋಡಬಹುದಾದಂತಹ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿವೆ. ಆಗುಂಬೆ, ಹುಂಚ, ಅಂಬುತೀರ್ಥ, ಮೃಗವಧೆ ಹಲವಾರು ಅಂತಹ ಸ್ಥಳಗಳಲ್ಲಿ ಮೊದಲವುಗಳು. ಅದಲ್ಲದೇ ಮತ್ತೂ ಕೆಲವು ಸ್ಥಳಗಳು ಹೆಚ್ಚೇನೂ ಹೆಸರು ಮಾಡದೆ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ. ಎರಡನೆಯ ರಾಷ್ಟ್ರಕವಿ ಕು.ವೆಂ.ಪುರವರ ಜನ್ಮಸ್ಥಳವಾದ ಕುಪ್ಪಳ್ಳಿಯ ಅಲಂಕೃತ ಮನೆ, ನಗರ-ಕವಲೇದುರ್ಗಗಳಲ್ಲಿನ ನಾಯಕ ವಂಶಸ್ಥರಾಳಿದ ಕೋಟೆಗಳು, ತೀರ್ಥಹಳ್ಳಿಯ ತುಂಗಾ ನದಿ, ಚಿಪ್ಪಲುಗುಡ್ಡೆ, ಕುಂದಾದ್ರಿ ಬೆಟ್ಟ ಇನ್ನೂ ಇತರೆ. ಮೇಲ್ಕಂಡ ಎಲ್ಲ ಕ್ಷೇತ್ರಗಳನ್ನು ನಾನು ನೋಡಿದ್ದೇನಾದರೂ ಇವೆಲ್ಲದರ ಮಾಹಿತಿಯನ್ನು ಈ ಲೇಖನದಲ್ಲಿ ನಾನು ಪ್ರಕಟಿಸಲಾರೆ. ಕಾಲಕೂಡಿಬಂದಾಗ ಉಳಿದೆಲ್ಲವುಗಳ ಬಗ್ಗೆ ಬರೆಯುತ್ತೇನೆ. ಕ್ಷಮೆ ಇರಲಿ.


ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಹಿರಿಯಡ್ಕ (9)- ಪೆರಡೂರು (15)- ಹೆಬ್ರಿ (29)- ಸೋಮೇಶ್ವರ (39)- ಆಗುಂಬೆ (49)- ತೀರ್ಥಹಳ್ಳಿ(81)- ಕುಪ್ಪಳ್ಳಿ (97)- ಕೊಪ್ಪ(108)


ಮಣಿಪಾಲದಿಂದ ಆಗುಂಬೆ ಘಾಟಿ ಎಡೆಗೆ ಹೊರಡಬೇಕು, ಮಣಿಪಾಲದಿಂದ ಪರ್ಕಳ... ಅಲ್ಲಿಂದ ನಾಲ್ಕೈದು ಕಿ.ಮಿ. ನಂತರದ ಊರೇ ಹಿರುಯಡ್ಕ. ಹಿರಿಯಡ್ಕದಿಂದ ನೇರ ರಸ್ತೆ ಕಾರ್ಕಳಕ್ಕೆ ಕರೆದೊಯ್ಯುತ್ತೆ. ಎಡಗಡೆಯ ವಿಶಾಲವಾದ ರಸ್ತೆ ಪೆರಡೂರು ಹೆಬ್ರಿ ಮಾರ್ಗವಾಗಿ ಸೋಮೇಶ್ವರಕ್ಕೆ ದಾರಿ ಮಾಡಿಕೊಡುತ್ತದೆ. ಪೆರಡೂರಿನ ಅನಂತಪದ್ಮನಾಭ ದೇವಸ್ಥಾನ ಅಲ್ಲಿನ ಬಸ್ ಸ್ಟಾಪ್ ಹತ್ತಿರವೇ ಇದೆ. ದರ್ಶನದಲ್ಲಿ ಆಸಕ್ತಿ ಇಲ್ಲವಾದರೆ ಹೆಬ್ರಿಗೆ ಹೊರಡಿ. ಅಲ್ಲಿಂದ ಸೋಮೇಶ್ವರಕ್ಕೆ. ಸೋಮೇಶ್ವರದಲ್ಲಿ ಸೀತಾ ನದಿ ಇದೆ. ಸೀತಾ ನದಿಯ ಜಲಪಾತವೂ ಇದೆ. ಎರಡೂ ನಿಮಗೆ ಒಳ್ಳೆಯ Trek ನೀಡಬಲ್ಲವುಗಳಾಗಿವೆ; ಹೆಬ್ರಿಯಿಂದ ಸೋಮೇಶ್ವರದವರೆಗೂ ರಸ್ತೆ ಸಿಕ್ಕಾಪಟ್ಟೆ ಹದಗೆಟ್ಟಿದೆ. ದ್ವಿಚಕ್ರ ವಾಹನದವರಿಗೆ ಮರ್ಯಾದೆಯೇ ಇಲ್ಲ!!!! ಎದುರುಗಡೆ ಬಸ್, ಲಾರಿ ಬಂದರೆ ನಮ್ಮ ದ್ವಿಚಕ್ರ ವಾಹನಗಳಿಗೆ ಆಸ್ಪದವೇ ಇಲ್ಲದಂತಾಗುತ್ತದೆ. ಸೋಮೇಶ್ವರದಿಂದ ಆಗುಂಬೆ ಘಾಟಿಯ ರಸ್ತೆ. ತೀಕ್ಷ್ಣ ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ಗಾಡಿ ಚಲಿಸುವುದು ಅಷ್ಟು ಸುಲಭವಲ್ಲ. 10 ಕಿ.ಮಿ. ಘಾಟಿ ರಸ್ತೆಯಬಳಿಕ ನಿಮಗೆ ಕಾಣಸಿಗುವುದು ಜಗತ್ಪ್ರಸಿದ್ಧ ಆಗುಂಬೆ. ಮಳೆಗಾಲದಲ್ಲಿ ಅತಿಯಾದ ಮಳೆ ಸುರಿಯುವುದರಿಂದ ದಕ್ಷಿಣ ಚೀರಾಪುಂಜಿಯಂತಲೂ ಆಗುಂಬೆಯನ್ನು ಕರೆಯುವುದುಂಟು. ಇಲ್ಲಿಂದಲೇ ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಾಣಬಹುದು. ನಮ್ಮಪ್ಪನ ಬಿಟ್ಟಿ ಸಲಹೆ - "ನವೆಂಬರ್ ನಿಂದ ಫ಼ೆಬ್ರವರಿಯವರೆಗೂ ಮೋಡಗಳಿಲ್ಲದಿರುವುದರಿಂದ ಸೂರ್ಯಾಸ್ತಮಾನ ಚೆನ್ನಾಗಿ ಕಾಣುತ್ತದೆ" ಎಂದು. ಆಗುಂಬೆಯ ಸಮೀಪವೇ ಒನಕೆಅಬ್ಬಿ ಜಲಪಾತ ಹಾಗು ಬರ್ಕಣ ಜಲಪಾತಗಳಿವೆ. ಇವೆರಡೂ ನಕ್ಸಲರ ಅಡಗುತಾಣವಾಗಿದೆ ಎಂದು ಹೇಳಲಾಗುತ್ತಿದೆ. ಆಗುಂಬೆಯಿಂದ ಚಿಕ್ಕಮಗಳುರಿನ ಕೊಪ್ಪ (35km), ಎನ್ ಆರ್ ಪುರ, ಶೃಂಗೇರಿ, ಹೊರನಾಡು ಹೋಗಲೂ ಒಂದು ರಸ್ತೆ, ತೀರ್ಥಹಳ್ಳಿ ಶಿವಮೊಗ್ಗಕ್ಕೆ ಹೋಗಲು ರಾಜ್ಯ ಹೆದ್ದಾರಿ SH-1 ಇದೆ. ತೀರ್ಥಹಳ್ಳಿಯ ರಸ್ತೆಯಲ್ಲಿ ಹೋಗುವಾಗ ದಿ ಶಂಕರ್ ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ನ ನೆನಪಾಗುತ್ತದೆ. ಆ ಶಾಲೆ, ಸ್ವಾಮಿಯ ಮನೆ, ಆ ಅಂಚೆ ಕಚೇರಿ ಎಲ್ಲವೂ ಇಂದಿಗೂ ಹಾಗೆಯೇ ಇದೆ ಎಂದೆನಿಸುತ್ತದೆ.

31 ಕಿ ಮಿ ಪ್ರಯಾಣದ ನಂತರ ತೀರ್ಥಹಳ್ಳಿ ಸಿಗುತ್ತದೆ. ಇಲ್ಲಿಂದಲೇ ನಗರ, ಹೊಸನಗರ, ಸಾಗರ, ಕುಪ್ಪಳ್ಳಿ, ಮೃಗವಧೆ ಎಲ್ಲದಕ್ಕೂ ಹೋಗಲೂ ಅನುಕೂಲಕರ ರಸ್ತೆಗಳಿವೆ. ನಾನು ಕೊಪ್ಪಕ್ಕೆ ಹೋದದ್ದು ತೀರ್ಥಹಳ್ಳಿ ಕುಪ್ಪಳ್ಳಿ ಮಾರ್ಗವಾಗಿ. ಸಾಧರಣ 28 ಕಿಮಿ ಹೆಚ್ಚು ಪ್ರಯಾಣ ಮಾಡಿದಂತಾಗುತ್ತದೆ. ಆದರೆ ಈ ರಸ್ತೆಯಲ್ಲಿ ಬರುವಾಗ ನಿಮಗೆ ಸಿಗುವ ಕುಪ್ಪಳ್ಳಿ ಎಂಬ ಪುಟ್ಟ ಊರು ಕು.ವೆಂ.ಪು ರವರು ಬೆಳೆದ ಊರು. ಶ್ರೀ ಎಸ್. ಎಂ. ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ ಕು.ವೆಂ.ಪು ರವರ ಮನೆಯನ್ನು ಒಂದು ವಸ್ತುಸಂಗ್ರಹಾಲಯ, ಅಧ್ಯಯನ ಕೇಂದ್ರವನ್ನಾಗಿಸಲೋಸುಗ ಈ ಬೃಹತ್ ಕೆಲಸವನ್ನು ಮಾಡಿಸಿದ್ದಾರೆ, ಸಾಧಾರಣ ಒಂದು ಕೋಟಿಯವರೆಗೂ ಖರ್ಚು ಮಾಡಿಸಿ ಈ ಕಾರ್ಯ ಸಂಪೂರ್ಣವಾಗಿಸಿದ್ದಾರೆ. ಕು.ವೆಂ.ಪು ರವರ ಹಳೆಯ ಕಾಲದ ಮನೆಯನ್ನು ಜೀರ್ಣೋದ್ಧಾರ ಮಾಡಿ, ವಸ್ತುಸಂಗ್ರಹಾಲಯ, ಗ್ರಂಥಾಲಯವಾಗಿ ನಿರ್ಮಿಸಲಾಗಿದೆ. ಎರಡು ಅಂತಸ್ತಿನ ಈ ಮನೆ ಹಳೆಯಕಾಲದ ಚೌಕಿ ಮನೆ. ಅಡಿಗೆಮನೆ, ಬಾಣಂತಿಕೋಣೆ, ನಡುಮನೆ, ಅಂಗಳ ಎಲ್ಲವನ್ನೂ ಕೂಡಿರುವ ಈ ಮನೆಯಲ್ಲಿ ಹಳ್ಳಿಯ ಮನೆಗಳಲ್ಲಿ ಉಪಯೋಗಿಸುವ ಎಲ್ಲಾ ತರಹದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹಲವೆಲ್ಲಾ ಕು.ವೆಂ.ಪು ಮನೆಯಲ್ಲೆ ಉಪಯೋಗಿಸುತ್ತಿದ್ದವುಗಳಾಗಿವೆ. ಉದಾಹರಣೆಗೆ ಅಡಿಗೆಮನೆಗಳಲ್ಲಿ ಬಳಸುವ ಶ್ಯಾವಿಗೆ ಒರಳುಗಳು, ಚಕ್ಕುಲಿ ಒರಳುಗಳು ದೊಡ್ಡ ದೊಡ್ಡ ಕೊಳಗಗಳು - ನೀರು ಹಿಡಿದಿಡಲು, ಅನ್ನ ಮಾಡುವ ಕಲ್ಗಡಿಗೆಗಳು - ಕಂಚಿನದ್ದು ಹಾಗು ಬಳಪದ್ದು, ನೀರು ಕಾಯಿಸುವ ಹಂಡೆಗಳು, ಅಡಿಕೆ ಬೇಯಿಸುವ ಹಂಡೆಗಳು, ದೋಸೆ ಮಾಡುವ ಹಂಚುಗಳು, ಕಡಬು ಮಾಡುವ ಸರಗೋಲು, ಬೆತ್ತದ ಜರಡಿಗಳು, ಭತ್ತದ ಫಣತಗಳು (ಕಣಜಗಳು), ನೀರಿನ ಬಾನಿಗಳು, ತೋಟ, ಹೊಲ, ಗದ್ದೆಗಳಲ್ಲಿ ರೈತರು ಬಳಸುವ ಕತ್ತಿ, ಅರಗತ್ತಿ, ದೋಟಿ, ನೇಗಿಲು ನೊಗ, ಕಂಬಳಿ ಗೊಪ್ಪೆ, ಹಾಳೆ ಟೊಪ್ಪಿಗೆ, ಕೋವಿ,ದರಗೆಲೆ ತುಂಬುವ ಜಲ್ಲೆ, ನೇಗಿಲು, ಮೀನು ಹಿಡಿಯುವ ಕೂಣಿ ...........


ಉಪ್ಪರಿಗೆಯ (ಮೊದಲನೆಯ, ಎರಡನೆಯ ಅಂತಸ್ತನ್ನು ಉಪ್ಪರಿಗೆಯೆನ್ನುತ್ತಾರೆ ಕೋಣೆಗಳಲ್ಲಿ ಕುವೆಂಪು ರವರ ಅಪರೂಪದ ಭಾವಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ, ಕನ್ನಡಕ, ಗಡಿಯಾರ, ಗಾಂಧಿ ಟೋಪಿ, ಬಿಳಿ ಪಂಚೆ, ಊರುಗೋಲು, ಕುರ್ಚಿ, ಇವೆಲ್ಲವೂ ಇಲ್ಲಿವೆ. ಕುವೆಂಪು ರವರ ಕೇಷವನ್ನೂ ಇರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದಾಗಿನ ಭಾವಚಿತ್ರಗಳು ಅವರಿಗೆ ಸಿಕ್ಕ ಪ್ರಶಸ್ತಿ ಪತ್ರಗಳು, ಪದಕಗಳು - ಜ್ನಾನಪೀಠ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್, ಎಲ್ಲವೂ ಅಲ್ಲಿ ಪ್ರದರ್ಶಿತ. ಅಲ್ಲಲ್ಲಿ ಕುವೆಂಪು ರವರ ಸುಂದರ ಕವನಗಳನ್ನು ಗೋಡೆಗಳ ಮೇಲೆ ಪ್ರದರ್ಶಿಸಿದ್ದಾರೆ. ಶಾಂತ ವಾತವರಣದಿಂದ ಕೂಡಿದ ಈ ಮನೆಯ ಪಕ್ಕದಲ್ಲೇ ಅಡಿಕೆಯ ತೋಟವಿದೆ. ಮನೆಯಿಂದ ಕಾಲ್ನಡಿಗೆ ದೂರದಲ್ಲಿ ಒಂದು ರಮ್ಯ ತಾಣವಿದೆ. ಅದೇ ಕವಿಶೈಲ. ಕುವೆಂಪುರವರು ತಮ್ಮ ಬಾಲ್ಯದ ದಿನಗಳಲ್ಲಿ ಇಲ್ಲಿಗೇ ಬಂದು ಕವನಗಳನ್ನು ಬರೆಯುತ್ತಿದ್ದರಂತೆ, ಇಲ್ಲಿಂದ ಪಶ್ಚಿಮ ಘಟ್ಟಗಳು ಬಹುಸುಂದರವಾಗಿ ಕಾಣುತ್ತದೆ. ಸೂರ್ಯಾಸ್ತಮಾನವೂ ಮನೋಹರವಾಗಿರುತ್ತದೆಂದು ಅಲ್ಲಿಯ ಮಾರ್ಗದರ್ಶಕ ತಿಳಿಸಿದನು,
ಕವಿಶೈಲದ ಬಗ್ಗೆ ಕು.ವೆಂ.ಪು ರವರ ವರ್ಣನೆ " ಓ ಕವಿಶೈಲ,........ ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ? ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ"


೧೬-೫-೩೬ ರಂದು ತಿ.ನಂ. ಶ್ರೀಕಂಠಯ್ಯ, ಬಿ.ಎಂ. ಶ್ರೀಕಂಠಯ್ಯ, ಕು.ವೆಂ. ಪುಟ್ಟಪ್ಪನವರ ಮನೆಗೆ ಬಂದಾಗ ಅಲ್ಲಿಯ ಒಂದು ಗುಡ್ಡದ ಮೇಲೆ ಆ ನೆನಪಿಗೋಸ್ಕರ ತಮ್ಮ ಹೆಸರುಗಳನ್ನು ಕೆತ್ತಿದ್ದಾರೆ. ಅಲ್ಲಿ ಪೂಚಂತೆಯ ಹೆಸರೂ ಮೂಡಿದೆ. ಪುಟ್ಟ ಮಗುವಾಗಿದ್ದ ಅವರೂ ತಂದೆಯೊಟ್ಟಿಗೆ ಅಲ್ಲಿಗೆ ಹೋಗಿದ್ದರೇನೋ...... ಕು.ವೆಂ.ಪು ರವರ ಸಮಾಧಿಯೂ ಅವರು ಹೆಚ್ಚಾಗಿ ಇಷ್ಟಪಡುತ್ತಿದ್ದ ಕವಿಶೈಲದಲ್ಲಿ. ತೆಜಸ್ವಿಯರೂ ಅಲ್ಲೇ ಹತ್ತಿರದ ಜಾಗದಲ್ಲೇ ಸೇರಿಕೊಂಡಿದ್ದಾರೆ.


ಕುಪ್ಪಳ್ಳಿಯಿಂದ ಕೊಪ್ಪ ಸುಮಾರು 11 ಕಿಮಿ. ಕೊಪ್ಪದ ಸುತ್ತಲೂ ಮತ್ತೊಮ್ಮೆ ಯಾವಾಗಲಾದರೂ ವಿಹಾರರ್ಥಕ್ಕೆ ಹೋದಾಗ ಅದರ ಬಗ್ಗೆ ಲೇಖನವನ್ನು ನೀವು ನಿರೀಕ್ಷಿಸಬಹುದು. ಕವಲೆದುರ್ಗ, ಕೊಳವಳ್ಳಿಯ ಬಗ್ಗೆ ನನ್ನ ಮುಂದಿನ ಲೇಖನ. ಊಟ ತಿಂಡಿಗಾಗಿ ನಿಮಗೆ ತಾರಾ ಹೋಟೆಲುಗಳಿಲ್ಲ ಆದರೂ ಕಾಫಿ ಚಹಾ ಸಿಗಲು ಸಣ್ಣಪುಟ್ಟ ಹೊಟೇಲುಗಳಿವೆ, ಆಗುಂಬೆ, ತೀರ್ಥಹಳ್ಳಿ, ಕೊಪಗಳಲ್ಲಿ ಟಿ.ಬಿ ಗಳಿವೆ; ಲಾಡ್ಜ್ ಗಳೂ ಇವೆ.

ನಿಮಗೆ ಸುಖ ಪ್ರಯಾಣ ಕೋರುವ,

ಪ್ರ ಕೊ ಪ

Saturday, January 17, 2009

ಮಣಿಪಾಲ್ - ಕಾರ್ಲ - ಮೂಡ್ಬಿದ್ರಿ












ಕಳೆದ ವಾರಂತ್ಯದ ಪ್ರಯಾಣ ಮೂಡುಬಿದಿರಿಗೆ. ಮಣಿಪಾಲದಿಂದ ಮೂಡುಬಿದಿರಿಗೆ ಮಾರ್ಗಗಳು ಎರಡು. ಒಂದು ಮಣಿಪಾಲ - ಉಡುಪಿ - ಮಂಗಳೂರು - ಮೂಡುಬಿದರಿ ಅಥವಾ ಮಣಿಪಾಲ - ಕಾರ್ಕಳ - ಮೂಡುಬಿದರಿ. ಎರಡನೆಯ ಮಾರ್ಗ 60 ಕಿಮಿ ದೂರ. ನ್ಯಾಯವಾಗಿ ಅಂದರೆ ಸಾಧಾರಣ ವೇಗದಲ್ಲಿ ದ್ವಿಚಕ್ರ ವಾಹನ ಚಲಿಸಿದರೆ, 90 ನಿಮಿಷದ ಪ್ರಯಾಣ. ಅಲ್ಲಿ ಇಲ್ಲಿ ಚಹಾ-ಗೋಳಿಬಜೆ-ಬೀಡಿ ಅಂತ ನಿಲ್ಲಿಸುತ್ತಾ ಹೋದರೆ ಎರಡು ಗಂಟೆಯಲ್ಲಿ ತಲುಪಬಹುದು. ಮಧ್ಯದಲ್ಲಿ ಚಹಾ-ಗೋಳಿಬಜೆಗೆ ನಿಲ್ಲಿಸದೇ ಯಾವುದಾದರೂ ಒಳ್ಳೆಯ ಪ್ರೇಕ್ಷಣೀಯ ಸ್ಥಳ ನೋಡೋಣವೆಂಬುದು ನಮ್ಮ ಗುರಿಯಾಗಿತ್ತು. ಅಂತು ಇಂತು ಪ್ರಕಾಶ್ ಶೆಣೈ ಒಂದು ಮಾರ್ಗಸೂಚಿ ಸಿದ್ಧಪಡಿಸಿದ್ದ. ಅನುಮೋದಿಸುವುದಕ್ಕೆ ಹೆಚ್ಚೇನು ಗೊತ್ತಿಲ್ಲವಾದ್ದರಿಂದ ಅವನು ಹೇಳಿದ್ದಕ್ಕೆಲ್ಲಾ ಒಪ್ಪಿಯಾಗಿತ್ತು. ಪ್ರವಾಸ ಮಾರ್ಗ ಕೊಡ್ಯಡ್ಕದ ಅನ್ನಪೂರ್ಣೇಶ್ವರಿ ದೇವಸ್ಥಾನ, ಮೂಡುಬಿದಿರಿಯ ಸಾವಿರ ಕಂಬದ ಬಸದಿ, ಹಾಗು ಕರಾವಳಿ ಕರ್ನಾಟಕದಲ್ಲಿ ಚಿರಪರಿಚಿತರಾದ ಶ್ರೀ ಮೋಹನ್ ಆಳ್ವಾ ರವರು ನಡೆಸಿಕೊಡುವ "ಆಳ್ವಾಸ್ ವಿರಾಸತ್" ಗಳನ್ನೆಲ್ಲಾ ವೀಕ್ಷಿಸುವುದು.

ಮಣಿಪಾಲದಿಂದ ಸಾಧಾರಣ 10:30ಕ್ಕೆ ಹೊರಟು ಮೊದಲಿಗೆ ಕಾರ್ಕಳಕ್ಕೆ ಬಂದು ಸೇರಿದೆ. ಕಾರ್ಕಳ ಬಸ್ ಸ್ಟಾಂಡಿಗಿಂತಲೂ ಎರಡು ಕಿಮಿ ಮುಂಚೆಯೇ ಜೋಡುಕಟ್ಟೆ ಎಂಬ ಊರು ಸಿಗುತ್ತದೆ. ಇಲ್ಲಿಂದ ಕಾರ್ಕಳದ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿ, ಚತುರ್ಮುಖ ಬಸದಿ ಗೆ ಸುಮಾರು 3 ಕಿಮಿ ದೂರ. ಜೋಡುಕಟ್ಟೆಯಿಂದ ನೇರ ಮಾರ್ಗದಲ್ಲಿ ಚಲಿಸಬೇಕು. ಕಾರ್ಕಳದ ಈ ಎರಡು ಸ್ಥಳಗಳನ್ನು ವೀಕ್ಷಿಸಿ ನಂತರವೂ ಮೂಡುಬಿದಿರಿ ಕಡೆಗೆ ಹೋಗಬಹುದು. ಕಾರ್ಕಳವನ್ನು ಬೈಪಾಸ್ ಮಾಡಲಿಚ್ಛಿಸುವವರು ಇಲ್ಲಿಂದ ಬಲಬದಿಗಿರುವ ಮಂಗಳೂರಿಗೆ ಹೋಗುವ ಉಪಮಾರ್ಗದಲ್ಲಿ ಚಲಿಸಬಹುದು. ಇಲ್ಲಿಂದ ಮಂಗಳೂರಿಗೆ 52 ಕಿಮಿ. ಅದೇ ರಸ್ತೆಯಲ್ಲಿ ಅತ್ತೂರು ಚರ್ಚ್ ಇದೆ. ಇದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲವಾದ್ದರಿಂದ ಆನಂದ ಯಾಲಿಗಾರರ ಬ್ಲಾಗಿಗೆ ಲಿಂಕ್ ಮಾಡುತ್ತೇನೆ.http://yalanand.blogspot.com/2008_08_01_archive.html ಅದೇ ನೇರ ರಸ್ತೆಯಲ್ಲಿ ಸಾಗುತ್ತಾ ಹೋದರೆ, ಒಂದು ವೃತ್ತ. ಒಂದು ರಸ್ತೆ ಬಜಗೋಳಿ-ಶೃಂಗೇರಿ ಸೇರುತ್ತದೆ. ಪಶ್ಚಿಮದ್ದು ಪಡುಬಿದಿರಿಗೆ ಕರೆದೊಯ್ಯುತ್ತದೆ. ನೇರ ಮಾರ್ಗ ಮಂಗಳೂರಿಗೆ. ರಸ್ತೆ ರಾಷ್ಟ್ರೀಯ ಹೆದ್ದಾರಿ 13. ಅದೇ ರಸ್ತೆಯಲ್ಲಿ ಮುಂದುವರಿದರೆ, ಅಲಂಗಾರು ಎಂಬ ಊರು ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ 5 ಕಿಮಿ ಚಲಿಸಿದರೆ, ಕೊಡ್ಯಡ್ಕ ಕ್ಷೇತ್ರ. ಇಲ್ಲಿನ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಮುಂದಾದೆವು. ಸುಮಾರು ೮-೧೦ ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನ ನಿರ್ಮಿತವಾದದ್ದು. ಭಕ್ತನೋರ್ವನಿಗೆ ದೇವಿ ಕನಸಲ್ಲಿ ಬಂದು ಒಂದು ದೇವಾಲಯ ಕಟ್ಟಿ ಅನ್ನದಾನ ಮಾಡಿದರೆ ಆತನಿಗೆ ಶ್ರೇಯಸ್ಸಗುವುದೆಂದು ವರವಿಟ್ಟ ಕಾಣಿಕೆಯೇ ಈ ದೇವಾಲಯ. ಈ ದೇವಾಲಯದಲ್ಲಿನ ಅಮ್ಮನ ಮೂರ್ತಿ ಬಹಳ ಸುಂದರವಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಪ್ರಸನ್ನಗಣಪತಿ, ವೀರಾಂಜನೇಯರಿಗೆಲ್ಲ ಮಂಗಳಾರತಿಯಾದ ಬಳಿಕ ದೇವಿಗೆ ಮಹಾ ಮಂಗಳಾರತಿ. ಭಜನಾಪ್ರಿಯರು ಸದಾಕಾಲ ಭಜನೆಗಳನ್ನು ಹಾಡಲು ಅವಕಾಶವಿದೆ. ತದನಂತರ ಪ್ರಸಾದ ವಿನಿಯೋಗ. ಭೋಜನ ಶಾಲೆಯಂತು ಬಹಳ ಸ್ವಚ್ಛವಾಗಿಟ್ಟಿದ್ದಾರೆ. ದೇವಾಲಯದ ಸುತ್ತಲೂ ಜಾನವಾರುಗಳನ್ನು ಸಾಕಿದ್ದಾರೆ. ಜಿಂಕೆಗಳು, ಮೊಲಗಳು, ಪಾರಿವಾಳಗಳು, ಕುದುರೆ, ಆನೆಗಳನ್ನೂ ಸಾಕಿದ್ದರೆ. ದೇವಸ್ಥಾನದ ಆವರಣದಲ್ಲೇ ಆಂಜನೇಯಸ್ವಾಮಿ ಸಂಜೀವಿನಿ ಪರ್ವತ ಎತ್ತಿಹಿಡಿದಿರುವ ಬೃಹತ್ ಮೂರ್ತಿ ಇದೆ.

ಈ ದೇವಸ್ಥಾನದಿಂದ ಹೊರಟು ಅಲಂಗಾರಿಗೆ ವಾಪಸ್ ಬಂದು ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಹೊರಟೆವು. ಅಲಂಗಾರಿನಿಂದ 2 ಕಿಮಿ ನಲ್ಲಿ ಮೂಡುಬಿದಿರಿ ಸೇರಬಹುದು, ಮೂಡುಬಿದಿರೆ ನೋಡುವ ಮುನ್ನ ಇದ್ದ ಕಲ್ಪನೆಯೇ ಬೇರೆಯಾಗಿತ್ತು. ಮೂಡುಬಿದಿರೆ ಬಸದಿ ಪ್ರಾಯಶ: ಸಾವಿರ ಕಂಬಗಳಿರುವುದರಿಂದ ಅತಿ ದೊಡ್ಡ ಬಸದಿ ಇರಬಹುದೆಂದು ಭಾವಿಸಿದ್ದೆ. ನಂತರವೇ ತಿಳಿದದ್ದು - ಒಟ್ಟು ಮೂರು ನೆಲೆಗಳಲ್ಲಿರುವ ದೊಡ್ಡ ಕಂಬಗಳು ಅವುಗಳಿಗೆ ಅಲಂಕಾರಕ್ಕಾಗಿ ಆಧಾರಕ್ಕಾಗಿ ಜೋಡಿಸಲಾದ ಚಿಕ್ಕ ಕಂಬಗಳನ್ನೆಲ್ಲಾ ಸೇರಿಸಿದರೆ ೧೦೦೦ ಕಂಬಗಳಿವೆಯೆಂದು. ರಚನೆಯಲ್ಲಿ ನೇಪಾಳಿ ವಿನ್ಯಾಸದಲ್ಲಿ ಕ್ರಿ.ಶ. 1430 ನಿರ್ಮಿತವಾದ ಈ ಬಸದಿಯನ್ನು ಹೊಸಬಸದಿ ಎಂದಾಗಿ, ಶ್ರೀ ಚಂದ್ರನಾಥಸ್ವಾಮಿಯು ಆರಾದನೆಗೊಳ್ಳೊವುದರಿಂದ ಚಂದ್ರನಾಥ ಸ್ವಾಮಿ ಬಸದಿ ಎಂದೂ ಕರೆಯುತ್ತಾರೆ. ದಕ್ಷಿಣಕಾಶಿ ಎಂದೆನಿಸಿಕೊಂಡ ಮೂಡುಬಿದಿರೆಯಲ್ಲಿ ಮತ್ತೂ ಕೆಲವು ಬಸದಿಗಳಿವೆ. ಭೈರಾದೇವಿ ಮಂಟಪದಲ್ಲಿನ ಒಂದೆರಡು ಕಂಬಗಳ ಚಿತ್ರಗಳನ್ನು ಜೋಡಿಸಿದ್ದೇನೆ.



ಅಲ್ಲಿಂದ ಡಾ|| ಮೋಹನ್ ಆಳ್ವರ ನೇತೃತ್ವದಲ್ಲಿ ಪ್ರತಿ ವರ್ಷವೂ ನಡೆಯುವ ಆಳ್ವಾಸ್ ವಿರಾಸತ್ ಗೆ ಹೊರಟೆವು. ವಿರಾಸತ್ ನಡೆಯುವುದು ಮಿಜಾರ್ ಎಂಬ ಊರಲ್ಲಿ. ಇದು ಮೂಡುಬಿದಿರೆಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿದೆ. ವಿರಾಸತ್ ನಡೆಯುವ ಈ ಸಭಾ ಸ್ಥಳದ ಹೆಸರು ಶೋಭಾವನ. ಶೋಭಾವನದ ಒಳಗೆ ಬರುವಾಗಲೇ ತಂಪಾದ ಆಯುರ್ವೇದಿ ಗಿಡ ಮೂಲಿಕೆಗಳ ತೋಟವೊಂದು ಕೈಬೀಸಿ ಕರೆಯುತ್ತದೆ. ಈ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಮನೆ ಮದ್ದಿನ ಸಸ್ಯಗಳ ತೋಟವಿದೆ. ಪ್ರತಿಯೊಂದು ಸಸ್ಯದ ಆರೋಗ್ಯ ಮೌಲಯವನ್ನು ಅಲ್ಲಿ ತಿಳಿಸಲಾಗಿದೆ. ಡಾ ಆಳ್ವರು ಆಯುರ್ವೇದ ವೈದ್ಯರಾದ್ದರಿಂದ ಇಂತಹ ಒಂದು ಸಸ್ಯ ತೋಟದ ಹೊಸಪ್ರಯೋಗ ಅಷ್ಟು ಕಷ್ಟ ಆಗಿರಲಿಕ್ಕೆ ಇಲ್ಲ. ಶೋಭಾವನದ ಈ ಸಸ್ಯ ತೋಟ ವರ್ಷಾವಧಿಯೂ ಪ್ರವೇಶಕ್ಕಿರುವುದಿಲ್ಲ. ಆಲ್ವಾಸ್ ನುಡಿಸಿರಿ, ವಿರಾಸತ್, ನಡೆಯುವ ಸಂದರ್ಭದಲ್ಲಿ ಮಾತ್ರ ತೆರೆದಿರುತ್ತದೆ.

ಟ್ರಿಪ್ ದಿನಾಂಕ - 10th Jan 2009
ಟ್ರಿಪ್ ಮೀಟರ್ - 71 ಕಿ ಮೀ
ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಜೋಡುಕಟ್ಟೆ (31)- ಅತ್ತೂರು ಚರ್ಚ್ (33)- ಅಲಂಗಾರ್ (50)- ಕೊಡ್ಯಡ್ಕ (55)- ಅಲಂಗಾರ್ (60)- ಮೂಡುಬಿದಿರೆ (62)- ಮಿಜಾರ್ (71)

ಮಣಿಪಾಲದಿಂದ ಮೂಡುಬಿದಿರೆಯವರೆಗೂ ರಸ್ತೆ ಬಹಳ ಚೆನ್ನಗಿದೆ. ಭಾನುವಾರದಂದು ಗಾಡಿ ಓಡಿಸಲು ಮಜಾ ಬರುತ್ತದೆ....ಏಕೆಂದರೆ ರಸ್ತೆ ಪೂರ್ಣ ನಮ್ಮಂತಹ ಹವ್ಯಾಸಿ ಪಯಣಿಗರಿಗೆ ಮಾತ್ರ ;-) ಕಾರ್ಕಳದಲ್ಲಿ, ಮೂಡುಬಿದಿರೆಯಲ್ಲಿ ಒಳ್ಳೆಯ ಹೊಟೆಲುಗಳಿವೆ.


ನಿಮಗಿನ್ನು ಶುಭ ಪ್ರಯಾಣ ಕೋರುವ,


ಪ್ರಕೊಪ
ಪ್ರವೀಣ್ ಪಟವರ್ಧನ್

Sunday, December 28, 2008

manipal - bengaluru rightsszzzss ಪೋಯಿ !!!!!






ನಮಸ್ಕಾರ ಎಲ್ಲರಿಗೂ!!

ಈ ಬ್ಲಾಗನ್ನು ಪ್ರಾರಂಭಿಸಿದಾನಂತರದ ಮೊದಲನೆಯ ಪ್ರಯಾಣದ ಟಿಪ್ಪಣಿ ಇದು. ಈ ಹಿಂದೆ ನಡೆದ ಪ್ರಯಾಣಗಳ ಸಂಕ್ಷಿಪ್ತ ಟಿಪ್ಪಣಿಗಳು ಇನ್ನು ಮುಂದೆ ಬರುವ ಸಾಧ್ಯತೆ ಇದೆ. ಮಣಿಪಾಲದಿಂದ ಬೆಂಗಳೂರಿಗೆ ನಮ್ಮ ಪ್ರಯಾಣ. ಮಣಿಪಾಲೇತರ ನಿವಾಸಿಗಳಿಗೆ ಈ ಪ್ರಯಾಣ ಅನಾಯಾಸವೆನಿಸುತ್ತದೆ. ಕಾರಣ ಎಲ್ಲರೂ ತಕ್ಷಣ ನೆನೆಸಿಕೊಳ್ಳುವುದು ಆ ಹಾದಿಯಲ್ಲಿ ಟ್ರಿಪ್ ಮಾಡುವ ದುರ್ಗಾಂಬ, ಸುಗಮ, ಐಡಿಯಲ್. ಪ್ರಗತಿ, ಸೀ ಬರ್ಡ್, ವಿಶಾಲ್ ಹೀಗೆ ಹತ್ತಾರು ಬಸ್ ಕಂಪನಿಗಳ ಹೆಸರುಗಳು ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿವೇಳೆಗೆ ಹಲವಾರು ಸುರಂಗಗಳ ಮಾರ್ಗದಲ್ಲಿ ಓಡುವ ಉಗಿಬಂಡಿಗಳು. ಆದರೆ ಬಸ್ಸಿನಲ್ಲಿ ಆಗಾಗ್ಯೆ ಓಡಾಡಿದವರಿಗೆ ಇದರ ತ್ರಾಸ ಅರ್ಥವಾಗುತ್ತದೆ. ರಾತ್ರಿ ಎಷ್ಟೆ ಹೊತ್ತಿಗೆ ಹೊರಟರು ಅಂತ್ಯ ಸ್ಥಾನ ಸೇರುವುದು ಬೆಳಿಗ್ಗೆ ಎಂಟರ ನಂತರವೇ. ಅಂದರೆ ಇದು ಕನಿಷ್ಟ ೧೨ ತಾಸುಗಳ ತ್ರಾಸಿನ ಪ್ರಯಾಣ.

ಕರಾವಳಿ ಕರ್ನಾಟಕದಿಂದ ಬೆಂಗಳೂರಿಗೆ ಬರಲಿಕ್ಕೆ ಕೆಲವು ಘಾಟಿಗಳಿವೆ. ಶಿರಾಡಿ, ಚಾರ್ಮಾಡಿ, ಆಗುಂಬೆ, ಕೆರೆಕಟ್ಟೆ ಅವುಗಳಲ್ಲಿ ಕೆಲವು. ಯಾವ ಘಾಟಿಯ ರಸ್ತೆಯೂ "ಬಹಳ ಚೆನ್ನಾಗಿದೆ.... ಮತ್ತೊಮ್ಮೆ ಬರಲೇಬೇಕು" ಅಂತ ಅನ್ನಿಸುವುದಿಲ್ಲ. ಕಾರಣ ಕಳಪೆ ಕಾಮಗಾರಿ, ಸಾವಿರಾರು ವಾಹನಗಳ ಓಡಾಟ, ಹಾಗು ಮಳೆಗಾಲದಲ್ಲಿ ಎಡಬಿಡದೆ ಸುರಿಯುವ ಮಳೆ. ಈ ಘಾಟಿಗಳಲ್ಲಿ ಬಸ್ಸುಗಳು ಹೋಗುವಾಗ ದೋಣಿಯಲ್ಲಿ ಕುಳಿತಷ್ಟು ಮಜ ಕೊಡುತ್ತದೆ. ಒಮ್ಮೆ ಬಲಕ್ಕೆ ವಾಲಿದ ಹಾಗೆ ಆದರೆ ಮತ್ತೊಮ್ಮೆ ಎಡಕ್ಕೆ. ಅಷ್ಟರಲ್ಲೇ ಬ್ರೇಕ್ ಹಾಕಿ ಮುಂದಕ್ಕೋ ಹಿಂದಕ್ಕೋ ಬಿದ್ದಿರುತ್ತೇವೆ. ಬಸ್ನವರಿಗೆ ಓಡಿಸಲಿಕ್ಕೆ ಬರುವುದಿಲ್ಲವೋ ಅಥವಾ ರೋಡುಗಳು ಇರೋದೇ ಹಾಗೊ ಎಂದು ಹಲವಾರು ಬಾರಿ ಅನಿಸಿದೆ.
ಪ್ರಶಾಂತ್(ಪಚ್ಚಿ) ಹಾಗು ನಾನು ಈ ಪ್ರಯಾಣವನ್ನು ನಮ್ಮ ಹೊಸ ವಾಹನಗಳ ಖರೀದಿಯಾದ ದಿನದಿಂದಲೂ ಸ್ಕೆಚ್ ಹಾಕುತ್ತಿದ್ದೆವು. ಪಚ್ಚಿ ಗಾಡಿ ಹಳೆಯದಾಗಿ ಮತ್ತೊಂದು ಹೊಸ ಗಾಡಿ (ಬಜಾಜ್ ಪಲ್ಸಾರ್) ಕೊಂಡು ೨ ತಿಂಗಳ ನಂತರವಷ್ಟೇ ಈ ಪ್ರಯಾಣಕ್ಕೆ ಶುಭ ಮುಹೂರ್ತ ಬಂದಿತು.


ಟ್ರಿಪ್ ದಿನಾಂಕ - 25-12-2008
ಟ್ರಿಪ್ ಮೀಟರ್ - 402 ಕಿ ಮೀ
ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಕಾರ್ಕಳ (34)- ಬಜಗೋಳಿ (44)- ನಾರವಿ (58)- ಗುರುವಾಯನಕೆರೆ (79)- ಬೆಳ್ತಂಗಡಿ (83)- ಉಜಿರೆ (88)- ಮುಂಡಾಜೆ (95)- ಚಾರ್ಮಾಡಿ (103)- ಕೊಟ್ಟಿಗೆಹಾರ (127)- ಬಣಕಲ್ (131)- ಮೂಡಿಗೆರೆ (141)- ಗೋಣಿಬೀಡು (150)- ಬೇಲೂರು (176)- ಹಾಸನ (214)- ಚೆನ್ನರಾಯಪಟ್ಟಣ (258)- ಕುಣಿಗಲ್ (327)- ನೆಲಮಂಗಲ (362)- ಬೆಂಗಳೂರು (402).

ಮಣಿಪಾಲದ ನಮ್ಮ ಮನೆಯಿಂದ ಸರಿಯಾಗಿ ಬೆಳಿಗ್ಗೆ 5:30 ಗಂಟೆಗೆ ಹೊರಟೆವು. ಮಣಿಪಾಲದಿಂದ ಕಾರ್ಕಳಕ್ಕೆ ಒಂದೇ ದಾರಿ. ನೇರ ಮಾರ್ಗ. ಅಲ್ಲಿಂದ ಧರ್ಮಸ್ಥಳ ಮಾರ್ಗ ಹಿಡಿಯಬೇಕು. ಈ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಹೊರಟರೆ ಮಂಗಳೂರು ಸೇರಿಬಿಡುತ್ತೀರಿ. ಎಚ್ಚರಿಕೆ!! ಸ್ವಲ್ಪ ದೂರದಲ್ಲೇ ಬಜಗೋಳಿ ಎಂಬ ಸಣ್ಣ ಊರು. ಇಲ್ಲಿಂದಲೂ ನೇರವಾಗಿಯೇ ಚಲಿಸಿ. ಎಡಕ್ಕೆ ತಿರುಗಿದಲ್ಲಿ ಕುದರೆಮುಖ, ಶೃಂಗೇರಿ ಸೇರುತ್ತೀರಿ. ಬಜಗೋಳಿಯಿಂದ ನೇರ ಹೊರಟರೆ ನಾರವಿ, ಗುರುವಾಯಂಕೆರೆ ದಾಟಿ ಬೆಳ್ತಂಗಡಿ ಸೇರುವಿರಿ. ಬೆಳ್ತಂಗಡಿಯಲ್ಲಿ ಅಷ್ಟೇನೂ ಖಾಸ್ ಅಲ್ಲದ ಬಸ್ ಸ್ಟಾಂಡ್ ಹೊಟೆಲ್- ಪ್ರಕಾಶ್ ನಲ್ಲಿ ತಿಂಡಿ ಚಹಾ ಮುಗಿಸಿದೆವು. ಬೆಳ್ತಂಗಡಿ ವರೆಗೂ ತಿಂಡಿಗೆ ಬಹಳ ಒಳ್ಳೆಯ ಹೊಟೇಲುಗಳು ವಿರಳ. ಗುರುವಾಯಂಕೆರೆಯಲ್ಲಿ ಅಂತಹ ಒಳ್ಳೆಯ ಹೊಟೆಲ್ ಕಾಣಲಿಲ್ಲ. ಉಜಿರೆಯಲ್ಲಿ ಹೊಟೆಲ್ ಮಿಸ್ ಮಾಡಿಕೊಂಡ್ರೆ ಮುಂದೆ ನಿಮಗೆ ಮೂಡಿಗೆರೆಯೇ ಗಟ್ಟಿ. ನಮಗಂತೂ ಹೊಟ್ಟೆ ತುಂಬಿತ್ತು. ಹಾಸನದಿಂದ 29 ಕಿಮೀ ದೂರದಲ್ಲಿದ್ದ ಬರಗೂರಲ್ಲೇ ಕಾಮತ್ ಉಪಚಾರ್ ನಲ್ಲಿ ಊಟ ಮಾಡಿದ್ದು. ಇಷ್ಟನ್ನು ಬಿಟ್ಟರೆ ಮಧ್ಯೆ ಮಧ್ಯೆ ನೀರು, ನಾರಿಕೀಲ, ಚಹಾ ಸೇವಿಸಲು ಅಲ್ಲಲ್ಲಿ ನಿಲ್ಲಿಸುತ್ತಿದ್ದೆವು.

ಮಧ್ಯದಲ್ಲಿ ದಾರಿ ತಪ್ಪಿಯೋ ಆಸೆ ಬದಲಾಗಿಯೋ ಬೇರೆ ಊರಿಗೆ ಹೋಗಬಹುದಾದ ಸಂದರ್ಭ ಬಹಳಷ್ಟಿವೆ.
೧) ಕಾರ್ಕಳದಿಂದ ಬಜಗೋಳಿ ಹೋಗುವ ದಾರಿಯಲ್ಲಿ ಎಡಕ್ಕೆ ತಿರುವಿದೆ. ಆ ತಿರುವು ನಿಮ್ಮನ್ನು ಶೃಂಗೇರಿ, ಕುದುರೆಮುಖಕ್ಕೆ ಸೇರಿಸುತ್ತದೆ.
೨) ಗುರುವಾಯಂಕೆರೆಯಿಂದ ಬೆಳ್ತಂಗಡಿ ಹೋಗುವಾಗ ಬಲಕ್ಕೆ ತಿರುವೊಂದು ಮಂಗಳೂರನ್ನು ಸೇರಿಸುತ್ತದೆ.
೩) ಉಜಿರೆಯಿಂದ ನೇರ ಮಾರ್ಗ ಮುಂಡಾಜೆಗೆ, ಬಲ ತಿರುವು ಧರ್ಮಸ್ಥಳಕ್ಕೆ - 10 ಕಿ ಮಿ ಉಜಿರೆಯಿಂದ.
೪) ಮೂಡಿಗೆರೆಯಿಂದ ಒಂದು ಮಾರ್ಗ ಚಿಕ್ಕಮಗಳೂರಿಗೆ ಕರೆದೊಯ್ಯುತ್ತದೆ ಮತ್ತೊಂದು ಬೇಲೂರಿಗೆ.
೫) ಗೋಣಿಬೀಡಿನಿಂದ ಸಕಲೇಶಪುರಕ್ಕೆ ದಾರಿ ಇದೆ. ಎಷ್ಟು ಸುಗಮ ಎಂದು ನೀವೇ ಕಂಡುಹಿಡಿದುಕೊಳ್ಳಬೇಕು.
೬) ಬೇಲೂರು ಚೆನ್ನಕೇಶವನ ದರ್ಶನದ ನಂತರ 15 ಕಿ ಮಿ ದೂರದಲ್ಲಿ ಹಳೇಬೀಡನ್ನು ವೀಕ್ಷಿಸಬಹುದು.
೭) ಕೊಟ್ಟಿಗೆಹಾರದಿಂದ ಬೇಲೂರಿಗೆ ರಾಜ್ಯ ಹೆದ್ದಾರಿ SH 58; ಬೇಲೂರಿನಿಂದ ಹಾಸನಕ್ಕೆ ರಾಜ್ಯ ಹೆದ್ದಾರಿ SH 57. ಹಾಸನದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ NH 48.
೮) ಹಾಸನದಿಂದ ಮೈಸೂರಿಗೆ, ಶಿವಮೊಗ್ಗಕ್ಕೆ ಎರ್‍ಅಡು ಪ್ರತ್ಯೇಕ ದಾರಿಗಳಿವೆ.
೯) ಶ್ರವಣಬೆಳಗೊಳದ ಗೊಮ್ಮಟೇಶ್ವರನ ದರ್ಶನಕ್ಕೆ ಚೆನ್ನರಾಯಪಟ್ಟಣದಿಂದ 15 ರಿಂದ 20 ಕಿ ಮೀ.


ರಸ್ತೆಯ ವಿಷಯಕ್ಕೆ ಬಂದರೆ ಮಣಿಪಾಲದ ಊರೊಳಗಿನ ರಸ್ತೆಗಳು ಹದಗೆಟ್ಟಿದ್ದರೂ ಕಾರ್ಕಳದವರೆಗೂ ಸುಂದರವಾಗಿದೆ. ಉಜಿರೆವರೆಗಿನ ರಸ್ತೆ ಅಲ್ಲಲ್ಲಿ ಹಾಳಾಗಿದೆಯಾದರು ಕೆಲವೆಡೆ ಡಾಂಬರೀಕರಣದಿಂದ ಸುಗಮವೆನಿಸುತ್ತದೆ. ಚಾರ್ಮಾಡಿ ಘಾಟ್ ತೀರ ಹದಗೆಟ್ಟು ಹೋಗಿಲ್ಲವಾದರೂ ಅಲ್ಲಲ್ಲಿ ಧರೆ ಕುಸಿಯುವ ಭಯವಿರುವುದರಿಂದ ಜಾಗರೂಕತೆಯಿಂದ ಮುನ್ನಡೆಯಬೇಕು. ಹಿಮ್ಮುರುವುಗಳು ಆಗುಂಬೆ ಘಾಟಿಯಷ್ಟೆ ಭಯಂಕರವಾಗಿದೆ. ಕೊಟ್ಟಿಗೆಹಾರದಿಂದ ಬೇಲೂರಿಗೆ ಒಂದೆರೆಡು ಮುರುವುಗಳಿವೆ. ಉಳಿದ ಹಾಗೆ ರಸ್ತೆ ಬೈಕ್, ಕಾರ್ ಓಡಿಸುವವರಿಗೆ ಒಳ್ಳೆಯ ಮಜ ನೀಡುತ್ತದೆ. ಬೇಲೂರಿನಿಂದ ನೆಲಮಂಗಲಕ್ಕೆ ಬರುವವರೆಗೂ ಬೆರಳೆಣಿಕೆಯಷ್ಟು ಬಾರಿ ಗೇರ್ ಬದಲಿಸುವ ಸಂದರ್ಭ ಬರಬಹುದು. ರಸ್ತೆ ನವೀನವೆನಿಸುತ್ತದೆ.

ಶುಭ ಪ್ರಯಾಣ ಹಾರೈಸುವ,

ನಿಮ್ಮ ಪ್ರಕೊಪ

Tuesday, December 9, 2008

ಪಯಣಿಗನೆಂಬ ಕೊರಕನ ಕೋರಿಕೆ!!!!

ಎಲ್ಲರಿಗೂ ನಮಸ್ಕಾರಗಳು.

ಎರಡು ಬಾರಿ ನಾನು ಅಮೇರಿಕಾಕ್ಕೆ ಹೋಗಿದ್ದೇನೆ. ಎರಡು ಬಾರಿ ಹೋದಾಗಲೂ ೩ ತಿಂಗಳು ಅಲ್ಲಿ ತಂಗಿದ್ದೇನೆ. ಹತ್ತಿರದಲ್ಲಿ ಎಲ್ಲಿಗೆ ಹೋಗಬೇಕಾದರೂ ಕಾರಿನ ಮೊರೆಹೋಗಬೇಕಷ್ಟೇ! ಚಾಲಕ ಎಷ್ಟೇ ಪ್ರವೀಣನಾದರೂ ನಾವಿಕನ ಅಗತ್ಯ ಅತಿಹೆಚ್ಚು. ಆ ನಾವಿಕ ಮನುಶ್ಯನೇ ಆಗಬೇಕು ಎಂಬಂತಿಲ್ಲ. ಮುದ್ದಾದ ಹುಡುಗಿ ಜಿ.ಪಿ.ಎಸ್ ರೂಪದಲ್ಲೂ ಸಹಾಯಕ್ಕೆ ಬರುತ್ತಾಳೆ ಕೆಲವಷ್ಟು ಡಾಲರ್ ಗಳ ಸುಲಿಗೆಯಷ್ಟೆ. ಅಂತ್ಯದಲ್ಲಿ ನೀವು ಸೇರಬೇಕಾದ ಸ್ಥಳ ಸೇರುತ್ತೀರೋ ಇಲ್ಲವೋ ಗೊತ್ತಿಲ್ಲ ಆದರೆ ಸೇರುವಷ್ಟರಲ್ಲಿ ಮಬ್ಬಾಗಿಬಿಟ್ಟಿರುತ್ತೀರ!! ನಕಾಶೆಗೂ ಹೇಳಿಕೊಳ್ಳುವಂತಹ ಕಷ್ಟವೇನೂ ಇಲ್ಲ. ಗೂಗಲ್ ನಲ್ಲಿ ಹೊರಡುವ ಸ್ಥಳದ ವಿಳಾಸ, ಸೇರುವ ಸ್ಥಳದ ವಿಳಾಸವನ್ನು ಸರಿಯಾಗಿ ತಿಳಿಸಿದರೆ ಪಕ್ಕ ಸುಲಭ ದಾರಿಯ ನಕಾಶೆ ತಯಾರುಮಾಡಿಕೊಡುತ್ತದೆ. ಅಂತಹ ನಕಾಶೆ ಹಿಡಿದು ಜನರು ಹೊರಟುಬಿಡುತ್ತಾರೆ. 

ಭಾರತದಲ್ಲಿ ಹಾಗಾಗುವುದಿಲ್ಲ. ಎಲ್ಲಿಗಾದರೂ ಹೋಗಬೇಕಾದರೆ ಆ ಸ್ಥಳದ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಸ್ನೇಹಿತರನ್ನು, ಬಂಧುಗಳನ್ನು ಕೇಳಿ ಎಲ್ಲಾವನ್ನು ತಿಳಿದುಕೊಂಡು ಹೊರಡುತ್ತಾರೆ. ದುರಾದೃಷ್ಟವಶದಿಂದ ಯಾರಿಗೂ ಆ ಸ್ಥಳದ ಬಗ್ಗೆ ತಿಳಿದಿರದಿದ್ದರೆ .... ದೇವರೇ ಗತಿ. ಪ್ರತಿಯೊಬ್ಬರೂ ಕೊಲಂಬಸ್ ಗಳಾಗಲು ಆರಂಭಿಸುತ್ತಾರೆ. ಇಂತಹ ಕಷ್ಟಗಳಿರಬಾರದೆಂದರೆ ನಮ್ಮಲ್ಲೂ ಅಂತಹ ಒಂದು ನಕಾಶೆಯ ಅಗತ್ಯತೆ ಇದೆ. ಅದು ಅಂತರ್ಜಾಲದ ರೂಪದಲ್ಲಾದರೂ ಆಗಬಹುದು, ಅಥವಾ ಪುಸ್ತಕ ರೂಪದಲ್ಲಾದರೂ ಆಗಬಹುದು. ಅಂತಹ ದೃಷ್ಟಿಯನ್ನಿಟ್ಟುಕೊಂಡು ಈ ಬ್ಲಾಗನ್ನು ಆರಂಭಿಸುತ್ತಿದ್ದೇನೆ. ಈ ಬ್ಲಾಗ್ ನ ಮುಖ್ಯ ಉದ್ದೇಶ ಹೊಸ ಜಾಗಗಳನ್ನು ಪರಿಶೋಧಿಸುವಂತಹದ್ದು. ಆ ಜಾಗಕ್ಕೆ ತಲುಪುವ ಒಂದು ಸುಲಭ ಮಾರ್ಗಸೂಚಿಯನ್ನಾಗಿಸುವಂತಹದ್ದು. ಈ ಬ್ಲಾಗ್ ನಲ್ಲಿ ಯಾರಾದರೂ ತಮ್ಮ ಪ್ರಯಾಣ-ಪರಿಶೋಧನೆ ಬಗ್ಗೆ ಬರೆಯಬಹುದು. ಬರೆದು ಸಹಕರಿಸಿ. ಓದಿ ಉಪಯೋಗ ಪಡೆಯಿರಿ.

ಇಂತಿ ನಿಮ್ಮ
ಪ್ರಕೊಪ